ಬೆಂಗಳೂರು: ಕೊರೊನಾ ಲಾಕ್‌ಡೌನ್ ಹಿನ್ನೆಲೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ನಿರ್ಗತಿಕರು, ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು. ಆದರೆ ಇಲ್ಲಿ ಸಾಮಾಜಿಕ ಅಂತರ ಮಾತ್ರ ಮಾಯವಾಗಿತ್ತು.
ದೇವೇಗೌಡರೇ ಖುದ್ದು ನಿಂತು ಹಲವರಿಗೆ ಆಹಾರ ವಿತರಿಸಿದರು. ಜೆಡಿಎಸ್ ಪಕ್ಷದ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಿ. ನಾರಾಯಣಸ್ವಾಮಿ ಅವರು ಆಹಾರ ಕಿಟ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆದರೆ ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹತ್ತಾರು ಮಂದಿ ದೇವೇಗೌಡರ ಸುತ್ತಮುತ್ತ ನಿಂತಿರುವುದು ಕಂಡು ಬಂತು. ಕೆಲವರು ಮಾಸ್ಕ್ ಗಳನ್ನು ಹಾಕಿದ್ದರೆ ಇನ್ನೂ ಕೆಲವರು ಮಾಸ್ಕ್ ಹಾಕದೇ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗಿಯಾಗಿದ್ದು, ಜನಜಂಗುಳಿ ಮಧ್ಯೆಯೇ ನಿಂತು ಹೆಚ್ಡಿಡಿ ಕಿಟ್ ವಿತರಣೆ ಮಾಡಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರೂ ಕೂಡ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಭದ್ರತಾ ಸಿಬ್ಬಂದಿ ಮನವಿ ಮಾಡಿದರೂ ಯಾರು ಅದಕ್ಕೆ ಕಿವಿಗೊಡಲಿಲ್ಲ. ಗಾಂಧಿನನಗರ ಕ್ಷೇತ್ರದ ಕೊಳೆಗೇರಿ ನಿವಾಸಿಗಳು ನೂರಾರು ಸಂಖ್ಯೆಯಲ್ಲಿ ಈ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದ್ರೆ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಆಹಾರ ಕಿಟ್ ವಿತರಣೆ ಮಾಡಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಯಿತು.