ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸಲು ನಿಮ್ಮಿಂದ ಸಾಧ್ಯವಿಲ್ಲ. ಕೂಡಲೇ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿಗೆ ಸವಾಲು ಹಾಕಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಬದಲಾಗುತ್ತಾರೆ ಎನ್ನುತ್ತಾರೆ ಸುರೇಶ್ ಗೌಡ. ಸ್ಟ್ರಾಂಗ್ ಗೃಹ ಸಚಿವರು ಬೇಕು ಎನ್ನುತ್ತಾರೆ ಯತ್ನಾಳ್, ಮಾಧುಸ್ವಾಮಿ ರಾಜೀನಾಮೆ ಕೊಡಬೇಕು ಎನ್ನುತ್ತಾರೆ ಮುನಿರತ್ನ, ಸಿಎಂ ಹೇಳಿದ್ರೆ ಕೊಡ್ತೀನಿ ಅಂತಾರೆ ಮಾಧುಸ್ವಾಮಿ, ಇಂತಹ ತಳ್ಳಾಟ, ಕಿತ್ತಾಟದ ಸರ್ಕಾರ ನಡೆಸುವುದಕ್ಕಿಂತ ವಿಸರ್ಜಿಸಿ ಚುನಾವಣೆಗೆ ಬನ್ನಿ ಎಂದು ಛೇಡಿಸಲಾಗಿದೆ.
ಅಲ್ಲದೇ, ಬಿಜೆಪಿ ವರ್ಸಸ್ ಬಿಜೆಪಿ ಟ್ಯಾಗ್ ಲೈನ್ ಬಳಸಿ ಟ್ವೀಟ್, ಸೊಗಡು ಶಿವಣ್ಣ vs ಜಿ.ಎಸ್ ಬಸವರಾಜ್, ರೇಣುಕಾಚಾರ್ಯ vs ಕೆ.ಸುಧಾಕರ್, ಸೋಮಶೇಖರ್ vs ಮಾಧುಸ್ವಾಮಿ, ಮುನಿರತ್ನ vs ಮಾಧುಸ್ವಾಮಿ, ಅಶೋಕ್ vs ಅಶ್ವಥ್ ನಾರಾಯಣ್, ಭಗವಂತ್ ಖೂಬಾ vs ಶರಣು ಸಲಗರ, ಕಾರ್ಯಕರ್ತರು vs ಬಿಜೆಪಿ, ಆರಗ ಜ್ಞಾನೇಂದ್ರ vs ಯತ್ನಾಳ್, ಬಿಎಸ್ವೈ vs ಸಂತೋಷ್.. ಒಂದೇ ಹಡಗಿನಲ್ಲಿ ಇಷ್ಟೊಂದು ರಂಧ್ರಗಳಿದ್ದರೆ ಮುಳುಗಡೆ ಇರುವುದೇ ಎಂದೂ ಲೇವಡಿ ಮಾಡಿದೆ.
ಶೇ.40ರಷ್ಟು ಕಮಿಷನ್ ಸರ್ಕಾರದಲ್ಲಿ ವೈಫಲ್ಯಗಳ ಮೂಟೆ ಹೊತ್ತಿರುವ ಸಚಿವರುಗಳು ಪರಸ್ಪರ ರಾಜೀನಾಮೆ ಕೇಳುತ್ತಿದ್ದಾರೆ. ಸಚಿವ ಎಸ್.ಟಿ.ಸೋಮಶೇಖರ್ ಅವರೇ, ಮೊದಲು ರಾಜೀನಾಮೆ ಕೊಡಬೇಕಾದವರು ನೀವೇ ಅಲ್ಲವೇ?. ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸುಲಿಗೆ ತಡೆಯುವ ಕನಿಷ್ಠ ಕಾಳಜಿ ಇಲ್ಲದಿರುವುದೇಕೆ?. ಮಾಹಿತಿ ಸಿಕ್ಕ ನಂತರವೂ ಸುಮ್ಮನಿದ್ದಿದೇಕೆ?. ಅದರಲ್ಲೂ ಶೇ.40 ಕಮಿಷನ್ ಇತ್ತೇ? ಎಂದು ಕಾಂಗ್ರೆಸ್ ಪ್ರಶ್ನಿಸಲಾಗಿದೆ.
ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಬೇಕೆನ್ನುವುದು ಜನರ ಬಯಕೆಯಷ್ಟೇ ಅಲ್ಲ, ಬಿಜೆಪಿಯವರ ಬಯಕೆಯೂ ಕೂಡ. ಈ ಬಯಕೆ ಸಚಿವ ಬಿ.ಶ್ರೀರಾಮುಲು ಅವರ ಬಾಯಲ್ಲೇ ವ್ಯಕ್ತವಾಗಿದೆ!. ಸಿಎಂ ಬಸವರಾಜ ಬೊಮ್ಮಾಯಿ ಅವರ 'ತಳ್ಳುವ ಸರ್ಕಾರ'ದ ಮೇಲೆ ಮಾಧುಸ್ವಾಮಿಯವರಂತೆ ಸಚಿವ ಶ್ರೀರಾಮುಲು ಅವರಿಗೂ ನಂಬಿಕೆ ಇಲ್ಲವಾಗಿದೆಯೇ ರಾಜ್ಯ ಬಿಜೆಪಿ ಎಂದು ಟ್ವೀಟ್ನಲ್ಲಿ ಕುಟುಕಲಾಗಿದೆ.
ಇದನ್ನೂ ಓದಿ: ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶ ಮತ್ತೆ ಮುಂದೂಡಿಕೆ ಪಕ್ಕಾ: ಕಾರಣವೇನು ಗೊತ್ತಾ?