ಬೆಂಗಳೂರು: ಕಳ್ಳತನಕ್ಕೆಂದು ನಗರಕ್ಕೆ ಬಂದಿದ್ದ ವ್ಯಕ್ತಿಗಳನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಉತ್ತರಪ್ರದೇಶದ ಗಾಜಿಯಾಬಾದ್ ಮೂಲದ ಅಕ್ಬರ್(36) ಮತ್ತು ಶಾದಬ್ ಖಾನ್ ಎಂದು ಗುರುತಿಸಲಾಗಿದೆ. ಅಕ್ಬರ್ ಹಲವು ವರ್ಷಗಳಿಂದ ಕಳ್ಳತನದ ಕೃತ್ಯಗಳಲ್ಲಿ ತೊಡಗಿದ್ದನು. ಮಹಾರಾಷ್ಟ್ರದ ಅಂಧೇರಿಯಲ್ಲಿ ವಾಸವಾಗಿದ್ದ ಈತ ಆಟೋರಿಕ್ಷಾ ಚಾಲನೆ ಮಾಡುತ್ತಿದ್ದ. ಜೊತೆಗೆ ಸ್ಥಳೀಯರೊಂದಿಗೆ ಸೇರಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಟು ಬಾರಿ ಜೈಲು ಪಾಲಾಗಿದ್ದ ಕಳ್ಳ : ಕಳ್ಳತನದಲ್ಲಿ ತೊಡಗಿದ್ದ ಅಕ್ಬರ್, ಮಹಾರಾಷ್ಟ್ರದಲ್ಲಿ ಹಲವು ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿದ್ದನು. 2004 ರಿಂದ ಇಲ್ಲಿಯವರೆಗೂ ಒಟ್ಟು 8 ಬಾರಿ ಜೈಲು ಪಾಲಾಗಿದ್ದು, ಹಣಕ್ಕಾಗಿ ನಗರದಲ್ಲಿ ಕಳ್ಳತನ ಮಾಡಲು ಬಂದಿದ್ದ ಸಂದರ್ಭ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ 400 ಗ್ರಾಂ ಚಿನ್ನ , 2 ಲಕ್ಷ ನಗದು ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳಾದ ಅಕ್ಬರ್ ಮತ್ತು ಶಾದಬ್ ಖಾನ್ ನ್ನು ಪೊಲೀಸರು ಬಂಧಿಸಿದ್ದು, ಸದ್ಯ ಬಂಧಿತ ಆರೋಪಿಗಳಿಂದ 7 ಲಕ್ಷ ರೂಪಾಯಿ ಮೌಲ್ಯದ 180 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಓದಿ : ಟ್ರಕ್-ಬೊಲೆರೊ ಮಧ್ಯೆ ಡಿಕ್ಕಿಯಾಗಿ 6 ಮಂದಿ ದುರ್ಮರಣ.. ಮದುವೆಗೆ ತೆರಳುತ್ತಿದ್ದವರು ಮಸಣದ ಹಾದಿ ಹಿಡಿದರು