ಬೆಂಗಳೂರು: ಕರಾವಳಿ ಭಾಗದಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಲ್ಲಿನ 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಗಸ್ಟ್ 29 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈಗಾಗಲೇ ಬೆಳಗ್ಗೆಯಿಂದ ನಿರಂತರವಾಗಿ ಮಂಗಳೂರಿನಲ್ಲಿ ಮಳೆಯಾಗುತ್ತಿದೆ. ಮೂರು ದಿನಗಳಿಂದ ಕೊಂಚ ಬಿಡುವು ಕೊಟ್ಟಿದ್ದ ವರುಣ, ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ.
ಇತ್ತೀಚೆಗೆ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ ಉತ್ತರ ಕರ್ನಾಟಕ ತತ್ತರಿಸಿ ಹೋಗಿತ್ತು. ಹಲವು ಜಿಲ್ಲೆಗಳ ಜನರ ಬದುಕು ಸಂಪೂರ್ಣ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಸಹಜ ಸ್ಥಿತಿಗೆ ಮರಳುವ ಮುನ್ನವೇ ಮಳೆ ಮುನ್ಸೂಚನೆ ನೀಡಿದ ಕಾರಣ ಜನರನ್ನು ಆತಂಕಕ್ಕೆ ದೂಡಿದೆ.