ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ರಾಜ್ಯದ ಜನ ಭಯಭೀತರಾಗಿದ್ದಾರೆ. ಸೂಕ್ತ ಚಿಕಿತ್ಸೆ ಸಿಗದೆ ಅದೆಷ್ಟೋ ಸೋಂಕಿತರು ಸಾವಿಗೆ ಶರಣಾದ ನಿದರ್ಶನವಿದೆ. ಹೀಗಾಗಿ, ಆರೋಗ್ಯ ಇಲಾಖೆ ಕೊರೊನಾ ಮೂರನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈಗಾಗಲೇ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ರಾಜ್ಯಕ್ಕೆ ಒಟ್ಟು 264 ಆಕ್ಸಿಜನ್ ಉತ್ಪಾದನೆ ಘಟಕಗಳು ಹಂಚಿಕೆ ಆಗಿದ್ದು, ಈ ಪೈಕಿ 226 ಘಟಕಗಳು ಸ್ವೀಕೃತವಾಗಿವೆ. ಪಿಎಂ ಕೇರ್ಸ್ನಿಂದ 50, ಪೆಟ್ರೋಲಿಯಂ ಸಚಿವಾಲಯದಿಂದ 31 ಉತ್ಪಾದನೆ ಘಟಕ ಲಭ್ಯವಾಗಿದೆ. ರಾಜ್ಯ ಸರ್ಕಾರದಿಂದ 40 ಪ್ಲಾಂಟ್ ಹಾಕಲಾಗಿದ್ದು, ಸಿಎಸ್ಆರ್ ಫಂಡ್ನಿಂದ 136, ರೈಲ್ವೆ ಬೋರ್ಡ್ನಿಂದ 3, ಕಲ್ಲಿದ್ದಲು ಸಚಿವಾಲಯದಿಂದ 6, ಎನ್ಆರ್ ಐ ಫಂಡ್ನಿಂದ 2 ಉತ್ಪಾದನಾ ಘಟಕಗಳು ಲಭ್ಯವಾಗಿದೆ. 226 ರಲ್ಲಿ 192 ಆಕ್ಸಿಜನ್ ಉತ್ಪಾದನಾ ಘಟಕಗಳು ಕಾರ್ಯಾರಂಭ ಮಾಡಿವೆ. 192 ಆಕ್ಸಿಜನ್ ಪ್ಲಾಂಟ್ ನಿಂದ 199 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯವಿದೆ.
ಆರೋಗ್ಯ ಇಲಾಖೆ ಆಯುಕ್ತ ಡಾ.ರಂದೀಪ್ ನಿರ್ದೇಶನ ಮೇರೆಗೆ ನಿನ್ನೆ ರಾಜ್ಯಾದ್ಯಂತ ಆಕ್ಸಿಜನ್ ಪ್ಲಾಂಟ್ಗಳ ಅಣಕು ಪ್ರದರ್ಶನ ನಡೆಯಿತು. ಬೆಂಗಳೂರಿನ ಸಿವಿ ರಾಮನ್ ನಗರ ಆಸ್ಪತ್ರೆಯಲ್ಲಿ ಬಯೋ ಮೆಡಿಕಲ್ ಇಂಜಿನಿಯರ್ ನೇತೃತ್ವದಲ್ಲಿ ಅಣಕು ಪ್ರದರ್ಶನ ನಡೆಯಿತು.