ಬೆಂಗಳೂರು: ಕೋವಿಡ್ 19 ಹಿನ್ನೆಲೆ ಸರ್ಕಾರದ ಎಲ್ಲ ತೆರಿಗೆ ಸಂಗ್ರಹ ಮೂಲಗಳು ಸೊರಗಿ ಹೋಗಿವೆ. ಇದಕ್ಕೆ ನಗರ ಸ್ಥಳೀಯ ಸಂಸ್ಥೆಗಳು ಹೊರತಾಗಿಲ್ಲ. ಕೊರೊನಾ ಬಳಿಕ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಸಂಪನ್ಮೂಲ ಕ್ರೋಢೀಕರಣಕ್ಕೆ ಭಾರಿ ಹೊಡೆತ ಬಿದ್ದಿದೆ.
ಕೋವಿಡ್ ಮಹಾಮಾರಿ ರಾಜ್ಯದ ಆರ್ಥಿಕ ಸ್ಥಿತಿಯನ್ನೇ ಬುಡಮೇಲಾಗಿಸಿದ್ದು, ರಾಜ್ಯದ ಸ್ವಂತ ತೆರಿಗೆ ಮೂಲಗಳನ್ನೇ ಸೊರಗುವಂತೆ ಮಾಡಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳಡಿ 10 ಮಹಾನಗರ ಪಾಲಿಕೆಗಳು (ಬಿಬಿಎಂಪಿ ಹೊರತು ಪಡಿಸಿ), 59 ನಗರ ಸಭೆಗಳು, 116 ಪುರಸಭೆಗಳು, 104 ಪಟ್ಟಣ ಪಂಚಾಯಿತಿಗಳು ಬರುತ್ತವೆ. ಈ ಎಲ್ಲದರಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೆಚ್ಚಿನ ಕೊಡುಗೆ ಇದ್ದು, ಈ ಬಾರಿ ಕೋವಿಡ್-19 ಮಹಾಮಾರಿಯಿಂದಾಗಿ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹವಾಗ ಬೇಕಿದ್ದ ರಾಜಸ್ವ ಇಳಿಮುಖವಾಗಿದೆ.
ರಾಜಸ್ವದಲ್ಲಿ ಆಗಿರುವ ಖೋತಾ ಎಷ್ಟು?:
ರಾಜ್ಯದ ಪ್ರಮುಖ ಆದಾಯ ಮೂಲವಾದ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹದಲ್ಲಿ ಈ ಬಾರಿ ದೊಡ್ಡ ಮಟ್ಟದ ಏರುಪೇರಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ, ವ್ಯಾಪಾರ ಪರವಾನಗಿ, ನಿವೇಶನ ತೆರಿಗೆಗಳ ಮೂಲಕ ಆದಾಯ ಸಂಗ್ರಹ ಮಾಡುತ್ತವೆ. ಆದರೆ, ಕೊರೊನಾದ ಅಟ್ಟಹಾಸದಿಂದ ಈ ಆದಾಯ ಸಂಗ್ರಹ ಕುಂಠಿತಗೊಂಡಿದೆ.
2020-21ರ ಡಿಸೆಂಬರ್ ಅಂತ್ಯಕ್ಕೆ ನಗರ ಸ್ಥಳೀಯ ಸಂಸ್ಥೆಗಳಿಂದ ಕೇವಲ ಶೇ 58.51ರಷ್ಟು ತೆರಿಗೆ ಸಂಗ್ರಹಿಸಲು ಸಾಧ್ಯವಾಗಿದೆ. ಇನ್ನೇನು ಆರ್ಥಿಕ ವರ್ಷ ಮುಕ್ತಾಯವಾಗಲಿದ್ದು, ಇದರಲ್ಲಿ ಗಣನೀಯ ಚೇತರಿಕೆ ಕಾಣುವುದು ಅನುಮಾನ ಎಂದು ಪೌರಾಡಳಿತ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
2020-21 ರ ಡಿಸೆಂಬರ್ ವರೆಗಿನ ಅಂಕಿ - ಅಂಶಗಳನ್ನು ನೋಡಿದರೆ, 211.11 ಕೋಟಿ ರೂ. ಹಿಂದಿನ ಬಾಕಿ ಜೊತೆಗೆ ಡಿಸೆಂಬರ್ ವರೆಗೆ 937.41 ಕೋಟಿ ರೂ. ತೆರಿಗೆ ಸಂಗ್ರಹದ ಬೇಡಿಕೆ ಇತ್ತು. ಒಟ್ಟು 1148.52 ಕೋಟಿ ರೂ. ನ ತೆರಿಗೆ ವಸೂಲಾತಿಯ ಬೇಡಿಕೆ ಇತ್ತು. ಆದರೆ, ಈ ಪೈಕಿ ವಸೂಲಾತಿಯಾಗಿದ್ದುಮ 672.04 ಕೋಟಿ ರೂ. ಮಾತ್ರ. ಸುಮಾರು 476.48 ಕೋಟಿ ರೂ. ತೆರಿಗೆ ವಸೂಲಿಯಾಗದೇ ಬಾಕಿ ಉಳಿದುಕೊಂಡಿದೆ. ಅಂದರೆ ಈವರೆಗೆ ಕೇವಲ 58.51ರಷ್ಟು ಪ್ರಗತಿ ಸಾಧ್ಯವಾಗಿದೆ ಎಂದು ರಾಜ್ಯ ಪೌರಾಡಳಿತ ನಿರ್ದೇಶನಾಲಯ ಮಾಹಿತಿ ನೀಡಿದೆ.
ಕಳೆದ 2019-20 ಆರ್ಥಿಕ ವರ್ಷದಲ್ಲಿ 167.46 ಕೋಟಿ ರೂ. ಹಿಂದಿನ ಬಾಕಿ ಜೊತೆಗೆ 727.58 ಕೋಟಿ ರೂ. ತೆರಿಗೆ ವಸೂಲಾತಿಯ ಬೇಡಿಕೆ ಇತ್ತು. ಒಟ್ಟು 895.04 ಕೋಟಿ ರೂ. ತೆರಿಗೆ ಬೇಡಿಕೆ ಪೈಕಿ 683.93 ಕೋಟಿ ರೂ. ವಸೂಲಾತಿ ಮಾಡಲಾಗಿದೆ. ಅಂದರೆ ಆರ್ಥಿಕ ವರ್ಷದ ಅಂತ್ಯಕ್ಕೆ ಸುಮಾರು 76.41ರಷ್ಟು ಪ್ರಗತಿ ಸಾಧಿಸಲಾಗಿತ್ತು. ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಗುರಿ ಮುಟ್ಟುವುದೂ ಅನುಮಾನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೆರಿಗೆ ಪರಿಷ್ಕರಣೆ ಮಾಡಿರುವ ಸರ್ಕಾರ:
ನಗರ ಸ್ಥಳೀಯ ಸಂಸ್ಥೆಗಳ ಆದಾಯ ಖೋತಾ ಆಗುತ್ತಿರುವ ಹಿನ್ನೆಲೆ ಇದೀಗ ಸರ್ಕಾರ ತೆರಿಗೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕಳೆದ ಅಧಿವೇಶನದಲ್ಲಿ ವಿಧೇಯಕವನ್ನು ಅಂಗೀಕರಿಸಿದೆ. ಆ ಮೂಲಕ ಹೆಚ್ಚಿನ ಆದಾಯ ಕ್ರೋಢೀಕರಣಕ್ಕೆ ಸರ್ಕಾರ ನಿರ್ಧರಿಸಿದೆ.
ಹೊಸ ಕಾಯ್ದೆ ಪ್ರಕಾರ ವಸತಿ ಹಾಗೂ ವಸತಿಯೇತರ ಕಟ್ಟಡಗಳಿಗೆ ಹಾಲಿ ಶೇ. 0.3 ರಿಂದ ಶೇ. 1ರವರೆಗೆ ಆಸ್ತಿ ತೆರಿಗೆ ವಿಧಿಸಲಾಗುತ್ತಿತ್ತು. ಈ ತೆರಿಗೆಯನ್ನು ಶೇ. 0.2 ರಿಂದ ಶೇ. 1.5ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ನಿವೇಶನಗಳಿಗೆ 1000 ಚದರ ಮೀಟರ್ (3 ಸಾವಿರ ಅಡಿ) ತೆರಿಗೆ ವಿನಾಯಿತಿ ನೀಡಲಾಗಿತ್ತು. ಈಗ ಅದನ್ನು ರದ್ದುಪಡಿಸಿ ನಿವೇಶನಗಳಿಗೆ ಶೇ. 0.2 ರಿಂದ ಶೇ. 0.5ರವರೆಗೆ ತೆರಿಗೆ ವಿಧಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದುವರೆಗೆ ಕಟ್ಟಡಕ್ಕೆ ಹೊಂದಿಕೊಂಡ ಖಾಲಿ ನಿವೇಶನ ಎಷ್ಟೇ ವಿಸ್ತೀರ್ಣವಿದ್ದರೂ ಅದಕ್ಕೆ ಯಾವುದೇ ತೆರಿಗೆ ವಿಧಿಸುತ್ತಿರಲಿಲ್ಲ. ಇದೀಗ ಕಟ್ಟಡಕ್ಕೆ ಹೊಂದಿಕೊಂಡ ನಿವೇಶನದಲ್ಲಿ 1,000 ಚದರ ಅಡಿವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ, 1000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಖಾಲಿ ಜಾಗಕ್ಕೆ ನಿವೇಶನಕ್ಕೆ ವಿಧಿಸುವ ತೆರಿಗೆ ವಿಧಿಸಲಾಗುತ್ತದೆ.