ಬೆಂಗಳೂರು: ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ರೇಷ್ಮೆ ಮಾರುಕಟ್ಟೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ರೇಷ್ಮೆ ಇಲಾಖೆ ಸಚಿವರ ಪರವಾಗಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಓದಿ: ಬಂಡವಾಳ ಹೂಡುವ ಉದ್ಯಮಿಗಳಿಗೆ ನೆರವು ನೀಡಲು ಸರ್ಕಾರ ಸಿದ್ದ: ಸಚಿವ ಶೆಟ್ಟರ್
ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಮಂಜುನಾಥ್ ಕೇಳಿದ ಪ್ರಶ್ನೆಗೆ ತೋಟಗಾರಿಕೆ ಸಚಿವ ಆರ್.ಶಂಕರ್ ಪರವಾಗಿ ಉತ್ತರಿಸಿದ ಡಿಸಿಎಂ, ಚನ್ನಪಟ್ಟಣದಲ್ಲಿ ಪೊಲೀಸ್ ತರಬೇತಿ ಕೇಂದ್ರದ ಬಳಿ 28 ಎಕರೆ ಜಾಗವಿದ್ದು, ಇದರಲ್ಲಿ 15 ಎಕರೆ ಜಮೀನಿನಲ್ಲಿ ರೇಷ್ಮೆ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಾಗುವುದು. ಈಗಾಗಲೇ ನೀಲನಕ್ಷೆ, ವಿಸ್ತೃತ ವರದಿ ಸಿದ್ಧವಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಇಲ್ಲಿ ಸುಮಾರು 100ಕ್ಕೂ ಹೆಚ್ಚು ಮೆಟ್ರಿಕ್ ಟನ್ ರೇಷ್ಮೆ ವಹಿವಾಟು ನಡೆಸುವ ಮಾರುಕಟ್ಟೆ ಆರಂಭವಾಗಲಿದೆ. ಇಲ್ಲಿ ಬಸ್ ನಿಲ್ದಾಣ, ಬ್ಯಾಂಕ್ ಸೌಲಭ್ಯ, ಪಾರ್ಕಿಂಗ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಮಾರುಕಟ್ಟೆ ಕಾಮಗಾರಿಗೆ ವಿನ್ಯಾಸ ಮತ್ತು ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸುವಂತೆ ನುರಿತ ನೋಂದಾಯಿತ ವಾಸ್ತುಶಿಲ್ಪಿಗಳನ್ನು ಟೆಂಡರ್ ಮೂಲಕ ಗುರುತಿಸಿ ಎಂಪ್ಯಾನಲ್ ಮಾಡಿ ಆದೇಶ ಹೊರಡಿಸಲಾಗಿದೆ. ಡಿಪಿಎಆರ್ ವರದಿ ಪ್ರಗತಿಯಲ್ಲಿರುವುದರಿಂದ ಮಾರುಕಟ್ಟೆ ನಿರ್ಮಾಣಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದರು.
ಚನ್ನಪಟ್ಟಣದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಿಸಲು 35 ಕೋಟಿ ರೂ.ಗಳ ಪ್ರಸ್ತಾವನೆಯನ್ನು ನಬಾರ್ಡ್ಗೆ ಸಲ್ಲಿಸಲಾಗಿದೆ. ಈ ಭಾಗದಲ್ಲಿ ಹೆಚ್ಚಿನ ರೇಷ್ಮೆಯನ್ನು ಬೆಳೆಯುತ್ತಿರುವುದರಿಂದ ಬೆಳೆಗಾರರಿಗೆ ಅನುಕೂಲ ಕಲ್ಪಿಸುವುದು ಸರ್ಕಾರದ ಉದ್ದೇಶ. ರೇಷ್ಮೆಯನ್ನು ಮುಟ್ಟದೆ ನೇರವಾಗಿ ಅಳತೆ ಮಾಡುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಲಾಗುವುದು ಎಂದು ಹೇಳಿದರು.
ಮಾಗಡಿಯಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡುವ ಉದ್ದೇಶವಿತ್ತು. ಇದಕ್ಕಾಗಿ ಎರಡೂವರೆ ಎಕರೆ ಜಮೀನನ್ನು ನಾವು ಕೆಐಎಡಿಬಿ ಮೂಲಕ ಭೂ ಸ್ವಾಧೀನ ಮಾಡಿಕೊಂಡಿದ್ದೆವು. ಆದರೆ ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಎರಡೂವರೆ ಎಕರೆ ಜಮೀನು ಸಿಕ್ಕರೂ ಇಲ್ಲಿ 25 ಮೆಟ್ರಿಕ್ ಟನ್ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಹೀಗಾಗಿ ಇದೆಲ್ಲವನ್ನೂ ಮನಗಂಡು ಚನ್ನಪಟ್ಟಣದ ಬಳಿ ಆಧುನಿಕ ಸೌಲಭ್ಯವುಳ್ಳ ರೇಷ್ಮೆ ಮಾರುಕಟ್ಟೆಯನ್ನು ತೆರೆಯಲು ತೀರ್ಮಾನಿಸಿದೆ ಎಂದರು.
ಸಲಹೆ ಮಾಡಿದ ಸ್ಪೀಕರ್:
ತೋಟಗಾರಿಕೆ ಬೆಳೆಗಳ ಹರಾಜು ಕಡಿಮೆ ದರಕ್ಕೆ ಆಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಸಲಹೆ ಮಾಡಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಪ್ರಶ್ನೆಗೆ ತೋಟಗಾರಿಕೆ ಸಚಿವ ಆರ್.ಶಂಕರ್ ಅವರ ಪರವಾಗಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಉತ್ತರಿಸುತ್ತಿದ್ದಾಗ ಸಭಾಧ್ಯಕ್ಷರು ಈ ಸಲಹೆ ಮಾಡಿದರು.
ಅದಕ್ಕೆ ಸಮ್ಮತಿಸಿದ ಡಿಸಿಎಂ, ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸುವ ಭರವಸೆ ನೀಡಿದರು. ತೋಟಗಾರಿಕೆ ಇಲಾಖೆಯಲ್ಲಿ ಪಾರದರ್ಶಕ ಕಾಯ್ದೆ ಉಲ್ಲಂಘಿಸಿಲ್ಲ. ಟೆಂಡರ್ ಮತ್ತು ಫಸಲಿನ ಮಾರಾಟವನ್ನು ಕಾಯ್ದೆ ಪ್ರಕಾರವೇ ಮಾಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು. ಆದರೆ, ಪ್ರಶ್ನೆ ಕೇಳಿದ ಶಾಸಕರು, ಹುಣಸೂರು ಕ್ಷೇತ್ರದಲ್ಲಿ ಒಂದು ಕೋಟಿ ರೂ. ಮೊತ್ತದ ಕಾಮಗಾರಿಯನ್ನು ನೇರವಾಗಿ ನಿರ್ಮಿಸಿ ಕೇಂದ್ರಕ್ಕೆ ಕೊಡಲಾಗಿದೆ ಎಂದು ಆರೋಪಿಸಿದರು.
ಶಾಸಕ ಆನಂದ್ ಸಿದ್ದು ನ್ಯಾಮಗೌಡ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ, ಕಳೆದ ಮೇ ತಿಂಗಳಿನಲ್ಲಿ ಅಕಾಲಿಕ ಮಳೆ, ಆಲಿಕಲ್ಲು, ಜುಲೈನಿಂದ ಅಕ್ಟೋಬರ್ವರೆಗೆ ಬಿದ್ದ ಮಳೆಯಿಂದಾಗಿ 5264.20 ಹೆಕ್ಟೇರ್ ದ್ರಾಕ್ಷಿ ಬೆಳೆ ಹಾನಿಯಾಗಿದ್ದು, ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್ಗೆ 18 ಸಾವಿರ ರೂ. ಗರಿಷ್ಠ ಎರಡು ಎಕರೆವರೆಗೆ ಪರಿಹಾರಧನ ವಿತರಿಸಲು ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಪರಿಹಾರ ವಿತರಣೆಗೆ ಕಂದಾಯ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.