ಬೆಂಗಳೂರು: ಬಿಜೆಪಿ ಸರ್ಕಾರ ಯಡಿಯೂರಪ್ಪ ನಾಯಕತ್ವದಲ್ಲಿ ಒಂದು ವರ್ಷದ ಅವಧಿ ಪೂರ್ಣಗೊಳಿಸಿದೆ. ಸಿಎಂ ನಾಯಕತ್ವದಲ್ಲಿ ಸಮಾಜದ ಸೇವೆ ಮತ್ತು ಉತ್ತಮ ವ್ಯವಸ್ಥೆ, ಜನರನ್ನು ಕೈ ಹಿಡಿಯುವ ಕಾರ್ಯವನ್ನು ನಮ್ಮ ಪಕ್ಷ, ನಾಯಕತ್ವ ಹಾಗೂ ಸರ್ಕಾರ ಮಾಡುತ್ತಾ ಬಂದಿದೆ ಎಂದು ಬಿಜೆಪಿ ಸರ್ಕಾರದ ಕಾರ್ಯ, ಸವಾಲು ಹಾಗೂ ಸಾಧನೆಯ ಪಕ್ಷಿನೋಟವನ್ನು ಡಿಸಿಎಂ ಡಾ.ಅಶ್ವತ್ಥನಾರಾಯಣ್ ಜನತೆಯ ಮುಂದಿಟ್ಟಿದ್ದಾರೆ.
ನಾವು ಅಧಿಕಾರ ವಹಿಸಿಕೊಂಡಾಗ ಅನಾವೃಷ್ಟಿಯಾಗಿ ಬರಗಾಲವಿತ್ತು. ನಂತರ ಕೆಲ ದಿನದಲ್ಲೇ ಅತಿವೃಷ್ಟಿ, ಉಪ ಚುನಾವಣೆ ಮತ್ತು ಕೋವಿಡ್ ಸೋಂಕು. ಈ ನಾಲ್ಕರ ಹಿನ್ನೆಲೆಯಲ್ಲೂ ಸವಾಲು, ಸಮಸ್ಯೆ ಇದ್ದರೂ, ಅಭಿವೃದ್ಧಿಗೆ ಹಿನ್ನಡೆ ಇಲ್ಲದಂತೆ ಹಲವಾರು ಸುಧಾರಣೆ ತಂದು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇವೆ. ಅನಾವೃಷ್ಟಿಯಲ್ಲಿ ಕಳೆದ ಸರ್ಕಾರ ವಿಫಲವಾಗಿತ್ತು. ಆದರೆ ಸಿಎಂ ಯಡಿಯೂರಪ್ಪ ಅತಿವೃಷ್ಟಿಯಾದ ಸಂದರ್ಭದಲ್ಲಿ 6 ಸಾವಿರ ಕೋಟಿರೂ.ಗೂ ಅಧಿಕ ನೆರವು ನೀಡಿ ಇಡೀ ವ್ಯವಸ್ಥೆಯನ್ನು ಸಂತ್ರಸ್ತರ ಮನೆ ಬಾಗಿಲಿಗೆ ಕೊಂಡೊಯ್ದಿದ್ದರು.
ನಾವು ಕಷ್ಟ ಕಾಲದಲ್ಲಿ ನೆರವಾಗಿದ್ದೇವೆ. 2 ಲಕ್ಷ ಕುಟುಂಬಕ್ಕೆ ತಲಾ 10 ಸಾವಿರ ರೂ. ಕೊಡಲಾಗಿದೆ. 1.25 ಲಕ್ಷ ಮನೆ ದುರಸ್ತಿಗೆ 911 ಕೋಟಿ ನೆರವು ನೀಡಿದ್ದು, ಸಂಪೂರ್ಣವಾಗಿ ಕುಸಿದ ಮನೆಗಳಿಗೆ 5 ಲಕ್ಷ ರೂ. ಕೊಡಲಾಗಿದೆ. ಬೆಳಗಳ ನಾಶಕ್ಕೆ 1,185 ಕೋಟಿ ಕೊಡಲಾಗಿತ್ತು. ಒಟ್ಟು 6,018 ಕೋಟಿಯನ್ನು ಪ್ರವಾಹದ ವೇಳೆ ವ್ಯಯಿಸಲಾಗಿದೆ ಎಂದರು.
ನಾವು ಉಪ ಚುನಾವಣೆ ಎದುರಿಸಬೇಕಾಯ್ತು. ಅತಿದೊಡ್ಡ ಪಕ್ಷವಾದರೂ ನಮಗೆ ಸರ್ಕಾರ ರಚನೆ ಮಾಡಲಾಗಲಿಲ್ಲ. ಜನ ತಿರಸ್ಕಾರ ಮಾಡಿದ್ದ ಕಾಂಗ್ರೆಸ್ ಭಂಡತನದಿಂದ ಮೈತ್ರಿ ಸರ್ಕಾರ ರಚನೆ ಮಾಡಿತು. ಆದರೆ, ಜನ ಪಡಬಾರದ ಕಷ್ಟ ಪಡುವಂತಾಯಿತು. ಈ ವೇಳೆ, ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರುವ ಕಾರ್ಯ ನಡೆಯಿತು. ಯಡಿಯೂರಪ್ಪ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರು. ಬೇರೆ ಪಕ್ಷದ ಸದಸ್ಯರು ನಮ್ಮ ಪಕ್ಷಕ್ಕೆ ಬಂದರು. ಉಪಚುನಾವಣೆಯಲ್ಲಿ 15 ಸ್ಥಾನದಲ್ಲಿ 12 ಜನರನ್ನು ಆಯ್ಕೆ ಮಾಡಿ ಸ್ಥಿರವಾದ ಸರ್ಕಾರ ರಚನೆಗೆ ಜನರು ಆಶೀರ್ವಾದ ಮಾಡಿದರು. ಆ ಮೂಲಕ ಜನರ ಕೈಹಿಡಿದು ಅವರ ಪರ ಕೆಲಸ ಮಾಡಿ ಬಹಳ ಸುಧಾರಣೆ ಮಾಡಿದ್ದೇವೆ ಎಂದು ಆಪರೇಷನ್ ಕಮಲವನ್ನು ಸಮರ್ಥಿಸಿಕೊಂಡರು.
ಅಭಿವೃದ್ಧಿಗೆ ಸ್ಥಿರ ಸರ್ಕಾರ ಅಗತ್ಯ. ಇಲ್ಲದೇ ಇದ್ದರೆ ಒಳ್ಳೆಯ ಆಡಳಿತ ಸಾಧ್ಯವಿಲ್ಲ. ಮೈತ್ರಿ ಸರ್ಕಾರದ ವೇಳೆ ಸಾಂದರ್ಭಿಕ ಶಿಶು ಹೇಳಿಕೆ, ಕಿತ್ತಾಟ ಹಾಗೂ ಗೊಂದಲ ನಿತ್ಯ ನೋಡುತ್ತಿದ್ದೆವು. ಜನರ ಕಷ್ಟದ ಬದಲು ಇವರ ಕಷ್ಟಗಳನ್ನೇ ನೋಡಬೇಕಿತ್ತು. ಈಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ಪ್ರಶ್ನೆ ಕೇಳಿಕೊಳ್ಳುತ್ತಿದ್ದಾರೆ. ಸಂಬಂಧವಿಲ್ಲದ ಪ್ರಶ್ನೆಗಳೊಂದಿಗೆ ಸರ್ಕಾರದ ಮೇಲೆ ಆಪಾದನೆ ಮಾಡಲು ಶುರುಮಾಡಿದರು. ಅವರು ಜನಪರ ಕಾರ್ಯ ಮಾಡಲಿಲ್ಲ. ಸ್ವಾರ್ಥದ ರಾಜಕಾರಣ ಮಾಡುತ್ತಾ ಬಂದಿದ್ದಾರೆ ಎಂದು ಟೀಕಿಸಿದರು.
ನಂತರ ಕೋವಿಡ್ -19 ಸಮಸ್ಯೆ ಎದುರಾಗಿದೆ. ಮುಂದುವರಿದ ರಾಷ್ಟ್ರಗಳು ತತ್ತರಿಸಿವೆ. ಆದರೆ ಮೋದಿ ನಾಯಕತ್ವದಲ್ಲಿ ದೇಶದಲ್ಲಿ ಉತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಲಾಗಿದೆ. ದೇಶದಲ್ಲಿ ಸಾಮಾನ್ಯ ಮಾರ್ಗಸೂಚಿ ರಚಿಸಿ ಎಲ್ಲೂ ಗೊಂದಲ ಇಲ್ಲದೆ, ಇಡೀ ದೇಶದಲ್ಲಿ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಇಡೀ ವಿಶ್ವವೇ ಇಂದು ದೇಶದತ್ತ ನೋಡುತ್ತಿದೆ. ಉತ್ತಮ ನಾಯಕತ್ವ ಇದ್ದರೆ ಏನನ್ನು ಬೇಕಾದರೂ ಎದುರಿಸಬಹುದು ಎಂದು ತೋರಿಸಿದ್ದೇವೆ. ಇಲ್ಲಿಯೂ ಸಿಎಂ ನೇತೃತ್ವದಲ್ಲಿ ಉತ್ತಮ ನಿರ್ವಹಣೆ ಮಾಡಲಾಗಿದೆ. ಆರಂಭದಲ್ಲಿ ರಾಜ್ಯದಲ್ಲಿ ಎರಡು ಲ್ಯಾಬ್ ಮಾತ್ರ ಇತ್ತು. ಇಂದು 100 ಕ್ಕೂ ಹೆಚ್ಚು ಲ್ಯಾಬ್ ಆರಂಭಿಸಿದ್ದೇವೆ. ವೆಂಟಿಲೇಟರ್ ಸೇರಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಪಿಪಿಇ ಕಿಟ್ ನಮ್ಮ ರಾಜ್ಯಕ್ಕೆ ಬೇಕಾದಷ್ಟಿದೆ. ನಾವು ಬೇರೆ ಕಡೆಯಿಂದ ತರಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಬೇರೆ ಕಡೆ ಇವಕ್ಕೆಲ್ಲಾ ಬೇರೆ ದೇಶಗಳಿಗೆ ಅವಲಂಬನೆಯಲ್ಲಿದ್ದಾರೆ. ಆದರೆ, ನಾವು ಸ್ವಾವಲಂಬಿಯಾಗಿದ್ದೇವೆ ಎಂದರು.
ಆರ್ಥಿಕ ಮುಗ್ಗಟ್ಟು ಕಷ್ಟ ಕಾಲದ ನಡುವೆ ಶಾಂತಿಯುತವಾಗಿ 60 ದಿನ ನಿರಂತರ ಲಾಕ್ಡೌನ್ನಲ್ಲಿ ಇಡೀ ದೇಶವೇ ಇತ್ತು. ಎಲ್ಲರೂ ಸಹಕಾರ ನೀಡಿದರು. ಯಾವುದಕ್ಕೂ ಕೊರತೆ ಆಗಲಿಲ್ಲ. ಆಹಾರ, ತರಕಾರಿ, ಔಷಧ ಕೊರತೆ ಇಲ್ಲ. ಊಟ ಆಹಾರ ಸರಬರಾಜು ಆಯಿತು. ರೇಷನ್ ನೀಡಲಾಯಿತು. ಸಾಹುಕಾರ, ಬಡವ ಎನ್ನದೇ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ದೇಶದಲ್ಲೇ ಮೊದಲ ಬಾರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಯಿತು ಎಂದು ಸರ್ಕಾರದ ಸಾಧನೆಯನ್ನು ಸಮರ್ಥಿಸಿಕೊಂಡರು.
ಜನಪರನಾಯಕ, ರೈತ ನಾಯಕ ಯಡಿಯೂರಪ್ಪ ನಾಯಕತ್ವದಲ್ಲಿ ಯಾವುದಕ್ಕೂ ಕೊರತೆ ಆಗದಂತೆ ಎಲ್ಲವನ್ನೂ ನಿರ್ವಹಣೆ ಮಾಡಲಾಗಿದೆ. ಆರೋಗ್ಯ ವ್ಯವಸ್ಥೆ ಉತ್ತಮಗೊಳಿಸಿ ನಿರ್ವಹಣೆ ಮಾಡಲಾಗುತ್ತಿದೆ. ಆರ್ಥಿಕ ಅಭಿವೃದ್ಧಿಗೆ ಅಡ್ಡಗಾಲು ಹಾಕಿ ಪ್ರಗತಿ ಕಾಣಬಾರದು ಎನ್ನುವ ಧೋರಣೆಯಲ್ಲಿ ಕಳೆದ 70 ವರ್ಷ ಅಡೆತಡೆಯಲ್ಲಿ ಇರಿಸಲಾಗಿತ್ತು. ಇದನ್ನು ತೊಡೆದುಹಾಕಲು ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲಾಯಿತು. ನ್ಯೂಜಿಲ್ಯಾಂಡ್ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕೃಷಿ ಭೂಮಿ ಖರೀದಿ ವಿಷಯದಲ್ಲಿಯೂ ಎಲ್ಲಿಯೂ ಇಂತಹ ಕಾನೂನು ಇರಲಿಲ್ಲ. ಬರೀ ಭ್ರಷ್ಟಾಚಾರಕ್ಕೆ ಇದ್ದ ಕಾನೂನನ್ನು ನಾವು ತಿದ್ದುಪಡಿ ತಂದು ಕೃಷಿಗೆ ಉತ್ತೇಜನ ನೀಡಿದ್ದೇವೆ ಎಂದರು. ಆದರೆ, ಇಷ್ಟು ವರ್ಷದಿಂದ ಬರೀ ಬಣ್ಣ ಬಳಿಯುವ ಕೆಲಸ, ರಾಜಕಾರಣ ಮಾಡಲಾಗುತ್ತಿತ್ತು. ಸರಿ ತಪ್ಪು ಆಲೋಚನೆ ಮಾಡುವ ಸಮಾಧಾನ ಇವರಿಗೆ ಇಲ್ಲ. ಜನರ ಅಭಿವೃದ್ಧಿ ಚಿಂತನೆ ಇಲ್ಲದೇ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿಎಂ ಯಡಿಯೂರಪ್ಪ ದಾವೋಸ್ಗೆ ಹೋಗಿ ವಿಶ್ವಮಟ್ಟದಲ್ಲಿ ನಾಯಕರ ಜೊತೆ ಚರ್ಚೆ ಮಾಡಿದ್ದಾರೆ. ಆದ್ರೆ ಕಾಂಗ್ರೆಸ್ನವರು ಅಲ್ಲಿಗೆ ಹೋಗದೇ ಇಲ್ಲೇ ಸುತ್ತುತ್ತಾ ಬೀದಿ ನಾಟಕ ಮಾಡುತ್ತಿದ್ದರು. ಆದರೆ, ಯಡಿಯೂರಪ್ಪ ದಾವೋಸ್ಗೆ ಹೋಗಿ ಬಂದರು. ಕೇವಲ ಅಕ್ಕಪಕ್ಕದ ರಾಜ್ಯಗಳ ಜೊತೆ ಸ್ಪರ್ಧೆ ಅಲ್ಲ. ವಿದೇಶಗಳ ಜೊತೆಯೂ ಪೈಪೋಟಿ ಅಗತ್ಯ ಎಂದು ಸಿಎಂ ತೋರಿಸಿದರು ಎಂದರು.
ಎಪಿಎಂಸಿ ಸುಧಾರಣೆ ಮಾಡಲಾಗಿದೆ. ಇನ್ವೆಸ್ಟ್ ಕರ್ನಾಟಕ ಜಾರಿಗೆ ತರಲಾಗಿದೆ. ಅಕ್ರಮ ಸಕ್ರಮ ತರಲಾಗಿದೆ. ಬಹಳಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೂ ಸಾಕಷ್ಟು ಯೋಜನೆಗಳನ್ನು ತರಲಾಗಿದೆ ಎಂದು ಒಂದು ವರ್ಷದ ಸಾಧನೆಯ ಪಕ್ಷಿ ನೋಟವನ್ನ ಸುದ್ದಿಗೋಷ್ಠಿ ವೇಳೆ ತೆರದಿಟ್ಟರು.