ಬೆಂಗಳೂರು: ನನಗೆ ಕೆಲ ನಿಬಂಧನೆ ಇದೆ. ನಾನೇನು ಮಾತಾಡೊಲ್ಲ ಎಂದು ಪ್ರವಾಸೋದ್ಯಮ ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಸಿ ಪಿ ಯೋಗೇಶ್ವರ್ ತಿಳಿಸಿದ್ದಾರೆ. ನಾಯಕತ್ವ ಬದಲಾವಣೆ ಮತ್ತು ರೇಣುಕಾಚಾರ್ಯ ಆರೋಪ ವಿಚಾರ ವಿಧಾನಸೌಧದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಏನೇ ಇರಲಿ, ನಾನು ಏನು ಮಾತಾಡೊಲ್ಲ ಎಂದಷ್ಟೇ ಹೇಳಿ ನಕ್ಕು ಸುಮ್ಮನಾದರು.
ನಮ್ಮ ನೋವನ್ನ ಎಲ್ಲಿ ಹೇಳಬೇಕು ಅಲ್ಲಿ ಹೇಳಿದ್ದೇವೆ. ಸರ್ಕಾರದ ವಿರುದ್ಧ ನಾವು ಎಲ್ಲಿಯೂ ಮಾತಾಡಿಲ್ಲ. ಯಡಿಯೂರಪ್ಪ ಸಿಎಂ ಆಗಬೇಕು ಅಂತ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸ್ನೇಹ ಕಡಿದು ಸಿಎಂ ಮಾಡಿಸಿದ್ದು ನಾವೇ. ಯಡಿಯೂರಪ್ಪ ನಮ್ಮ ನಾಯಕರು. ಅದ್ರಲ್ಲಿ ಎರಡು ಮಾತಿಲ್ಲ ಎಂದರು.
ನಮ್ಮಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನು ಎರಡು ವರ್ಷ ಮುಂದುವರಿಯಬೇಕು ಎಂಬುದು ನನ್ನ ಇಚ್ಛೆ. ನನ್ನ ನೋವನ್ನು ಎಲ್ಲಿ ಹೇಳಿಕೊಳ್ಳಬೇಕೋ ಅಲ್ಲಿ ಹೇಳಿಕೊಂಡಿದ್ದೇನೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳುತ್ತೇವೆ. ಆರ್.ಅಶೋಕ್ ಸೇರಿದಂತೆ ಎಲ್ಲ ನನ್ನ ಸ್ನೇಹಿತರು ಅವರು ಏನು ಬೇಕಾದರೂ ಹೇಳಬಹುದು. ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡೋದಿಲ್ಲ ಎಂದು ವಿವರಿಸಿದರು.
ಡಿಕೆಶಿ ವಿರುದ್ಧ ಯೋಗೇಶ್ವರ್ ವಾಗ್ದಾಳಿ:
ಡಿಕೆಶಿ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಮಠಗಳಿಗೆ ಲಾಪ್ ಟ್ಯಾಪ್ ಹಿಡಿದು ಯೋಗೇಶ್ವರ್ ಹೋದರು ಅನ್ನೋ ಆರೋಪ ವಿಚಾರ ಮಾತನಾಡಿ, ಡಿಕೆ ಶಿವಕುಮಾರ್ಗೆ ನನ್ನ ವಿರುದ್ಧ ಮಾತಾಡೋದು ಅನಿವಾರ್ಯ ಆಗಿದೆ. ಬಿಜೆಪಿಗೆ ಅವರು ಸಾಮಾನ್ಯ ಸದಸ್ಯನಾಗಿ ಸದಸ್ಯತ್ವ ತೆಗೆದುಕೊಳ್ಳೋದು ಒಳ್ಳೆಯದು. ಸಿಡಿ ಸಂಸ್ಕೃತಿ ಡಿ.ಕೆ. ಶಿವಕುಮಾರ್ ಅವರದ್ದು. ಹಿಂದೆ ಸಿಡಿ ಮಾಡಿದ್ದು ಅವರು, ರಮೇಶ್ ಜಾರಕಿಹೋಳಿ ಪ್ರಕರಣ ಎಲ್ಲರಿಗೂ ಗೊತ್ತಿಲ್ಲವಾ? ನನ್ನ ಬಗ್ಗೆ ಕುಚೋದ್ಯ ಮಾಡಬೇಕು, ಸಮಾಜದಲ್ಲಿ ಕಳಂಕ ತರಿಸಬೇಕು ಅಂತ ಹೀಗೆಲ್ಲ ಮಾತಾಡ್ತಿದ್ದಾರೆ. ಡಿಕೆ ಶಿವಕುಮಾರ್ ನನ್ನ ರಾಜಕೀಯ ವಿರೋಧಿ ಎಂದು ಹರಿಹಾಯ್ದರು.
ಸಿಡಿ ಸಂಸ್ಕೃತಿ ಅವರಿಗೆ ಸೇರಿದ್ದು: ನನ್ನನ್ನ ಏನೋ ಮಾಡಿ ತಗಲು ಹಾಕಬೇಕು ಅಂತ ಹೀಗೆಲ್ಲ ಮಾತಾಡ್ತಿದ್ದಾರೆ. ಸಿಡಿ ಸಂಸ್ಕೃತಿ ಅವರಿಗೆ ಗೊತ್ತು . ನಮ್ಮ ಜಿಲ್ಲೆಯ ಎಲ್ ಎನ್ ಮೂರ್ತಿ ಅನ್ನೋರು ಅವರು ಯಾರು ಯಾರಿಗೆ ಸಿಡಿ ತೋರಿಸುತ್ತಿದ್ದರು ಎಂದು ಬರೆದಿದ್ದಾರೆ. ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಹಿಂದೆ ಯಾರು ಇದ್ರು ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಜೆಎಸ್ಎಸ್ ಮಠಕ್ಕೆ ಆದಿ ಚುಂಚನಗಿರಿ ಮಠಕ್ಕೆ ಹೋಗುತ್ತಲೇ ಇರುತ್ತೇನೆ. ನಾನು ಹೋಗಿ ಬಂದ ತಕ್ಷಣ ಅವರು ಹೋಗುತ್ತಾರೆ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ. ತಿಹಾರ್ ಜೈಲಿಗೆ ಹೋಗಿ ಬಂದ ಮೇಲೆ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್ ಗೆ ಏಕೆ ನಮ್ಮ ಪಕ್ಷದ ಉಸಾಬರಿ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು