ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ (ಒಪಿಡಿ)ಕ್ಕೆ ಬರುವ ಎಲ್ಲ ಐಎಲ್‌ಐ (ಉಸಿರಾಟ ಸಂಬಂಧಿತ) ರೋಗಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ವಿಶೇಷ ಆಯುಕ್ತರು (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಿಸುವ ಸಂಬಂಧ 100ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್(PHANA) ಜೊತೆ ಇಂದು ಸಭೆ ನಡೆಸಲಾಗಿದೆ. ಬಳಿಕ ಮಾತನಾಡಿದ ಅವರು, ನಗರದಲ್ಲಿ ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯದಿದ್ದರೆ ಕೂಡಲೇ ಎಲ್ಲರಿಗೂ ಎರಡನೇ ಡೋಸ್ ಲಸಿಕೆ ನೀಡಬೇಕು. ಜೊತೆಗೆ ಆಸ್ಪತ್ರೆಗೆ ಬರುವ ಎಲ್ಲರಿಗೂ ಎರಡೂ ಡೋಸ್ ಲಸಿಕೆ ಪಡೆದಿರುವ ಬಗ್ಗೆ ಖಾತರಿಪಡಿಸಿಕೊಂಡು ಲಸಿಕೆ ಪಡೆಯದವರಿಗೆ ಲಸಿಕೆ ನೀಡಬೇಕು ಎಂದು ಹೇಳಿದರು.
ಸರ್ಕಾರದ ಹಿಂದಿನ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಹಾಸಿಗೆ ಮೀಸಲಿಡಲು ಸಿದ್ಧರಾಗಿರಬೇಕು. ಅಲ್ಲದೇ ಮಕ್ಕಳ ಚಿಕಿತ್ಸೆಗಾಗಿಯೂ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಸೋಂಕು ಚಿಕಿತ್ಸೆಗಾಗಿ ಮೀಸಲಿಟ್ಟಿರುವ ಹಾಸಿಗೆಗಳ (ರಿಯಲ್ ಟೈಮ್ ಬೆಡ್ ಅವೈಲಬಲಿಟಿ) ಬಗ್ಗೆ PHANA ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು. ಇದಲ್ಲದೆ ಆಕ್ಸಿಜನ್ ಸಮಸ್ಯೆಯಾಗದಂತೆ ಮುಂಚಿತವಾಗಿ ಎಲ್ಲ ರೀತಿಯ ಪೂರ್ವ ತಯಾರಿಗಳನ್ನು ಮಾಡಿಕೊಂಡಿರಬೇಕು ಎಂದು ಸೂಚನೆ ನೀಡಿದರು.
ಬಿಬಿಎಂಪಿಯಿಂದ ವಿಶೇಷ ಆಸ್ಪತ್ರೆ ತಪಾಸಣಾ ತಂಡಗಳು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಜಾರಿಗೊಳಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದಾರೆ ಎಂದರು.
(ಇದನ್ನೂ ಓದಿ: ಸಿಎಂ ಬೊಮ್ಮಾಯಿ 1 ತಿಂಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ.. ನಮ್ಮ ಶಾಪ ತಟ್ಟದೇ ಇರಲ್ಲ.. ಬಸವಪ್ರಕಾಶ ಸ್ವಾಮೀಜಿ)