ಬೆಂಗಳೂರು : ಹಬ್ಬಕ್ಕೆ ಅಂತ ರುಚಿ ರುಚಿಯಾದ ತಿನಿಸು ಸವಿಯಲು ಹೋಟೆಲ್‌ಗೆ ಹೋಗುವ ಪ್ಲಾನ್ ಇದ್ರೆ ಒಮ್ಮೆ ನಗರದ ಜನ ಯೋಚನೆ ಮಾಡಬೇಕಾಗುತ್ತೆ. ಯಾಕೆಂದ್ರೆ, ಬೆಂಗಳೂರಿನ ಜೆಪಿ ನಗರದ ಹೋಟೆಲ್‌ವೊಂದರಲ್ಲಿ ಕೊರೊನಾ ಸೋಂಕು ಬರೊಬ್ಬರಿ 19 ಮಂದಿಗೆ ತಗುಲಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಜೆಪಿ ನಗರದ ಚುಲ಼ಾ ಚೌಕಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ 55 ಮಂದಿಯ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 19 ಜನ ಸಿಬ್ಬಂದಿಗೆ ಕೋವಿಡ್ ತಗುಲಿರುವುದು ಸ್ಪಷ್ಟವಾಗಿದೆ.
ಇನ್ನು, ಹೋಟೆಲ್‌ಗೆ ಭೇಟಿ ನೀಡಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಸೋಂಕಿತರನ್ನು ಹೋಮ್ ಐಸೋಲೇಟ್ ಮಾಡಿದ್ದಾರೆ. ರೋಗ ಲಕ್ಷಣಗಳು ಹೆಚ್ಚಾದ್ರೆ ಆಸ್ಪತ್ರೆಗೆ ದಾಖಲಿಸಲು ಸೂಚಿಸಿದ್ದಾರೆ.
ಈ 19 ಜನ ಪಾಸಿಟಿವ್ ರೋಗಿಗಳಿಗೆ ಕೊರೊನಾ ಚಿಕಿತ್ಸೆಗೆ ಬೇಕಾಗಿರುವ ಔಷಧಿ ವ್ಯವಸ್ಥೆಯನ್ನ ಬಿಬಿಎಂಪಿ ಮಾಡಿದೆ. ಸೋಂಕಿತ-19 ಜನರಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಈಗಾಗಲೇ ಎಲ್ಲರನ್ನೂ ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಬಿಬಿಎಂಪಿ ದಕ್ಷಿಣ ವಲಯ ಆರೋಗ್ಯಾಧಿಕಾರಿ ಶಿವಕುಮಾರ್ ಮಾಹಿತಿ ನೀಡಿದ್ದಾರೆ.