ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಜನರ ಸಹಕಾರದೊಂದಿಗೆ ಇನ್ನಷ್ಟು ಸೋಂಕಿನ ಪ್ರಮಾಣ ಕಡಿಮೆ ಮಾಡುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಹತ್ತು ದಿನದಿಂದ 300ಕ್ಕೂ ಕಡಿಮೆ ಪ್ರಕರಣ ಕಂಡು ಬರುತ್ತಿವೆ. ಜನರ ಸಹಕಾರದೊಂದಿಗೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲಿಸಿದ್ರೆ ಪ್ರಕರಣಗಳ ಸಂಖ್ಯೆಯನ್ನು ಮತ್ತಷ್ಟು ಇಳಿಕೆ ಮಾಡಲು ಸಾಧ್ಯ ಎಂದರು.
ನಗರದಲ್ಲಿ ಶ್ರಾವಣ ಮಾಸ, ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮಾರುಕಟ್ಟೆಗಳಲ್ಲಿ ಸಾಕಷ್ಟು ಜನಜಂಗುಳಿ ಉಂಟಾಗಿತ್ತು. ಇದರಿಂದ ಕೋವಿಡ್ ಏರಿಕೆಯಾಗುವ ಆತಂಕ ಉಂಟಾಗಿತ್ತು. ಸದ್ಯಕ್ಕೆ ಕೋವಿಡ್ ಪ್ರಕರಣ ನಿಯಂತ್ರಣದಲ್ಲಿರುವುದರಿಂದ ಬಿಬಿಎಂಪಿ ನಿಟ್ಟುಸಿರು ಬಿಟ್ಟಿದೆ ಎಂದರು.
ಪಾಲಿಕೆಯ ತಜ್ಞರ ಸಮಿತಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಲಹೆಗಳನ್ನು ಪಡೆಯಲಾಗುತ್ತಿದೆ. ಕೋವಿಡ್ ಲಸಿಕೆ ಪ್ರಮಾಣವೂ ಶೇ.73ರಷ್ಟು ಆಗಿದೆ. ಎರಡನೇ ಡೋಸ್ಗೆ ಕೂಡ ಜನರು ಆಸಕ್ತಿಯಿಂದ ಬರುತ್ತಿದ್ದಾರೆ.
ಈಗ ವ್ಯಾಕ್ಸಿನ್ ಪೂರೈಕೆ ಉತ್ತಮವಾಗಿದ್ದು, 80 ರಿಂದ 90 ಸಾವಿರ ಡೋಸ್ ಬರುತ್ತಿವೆ. ಪ್ರತಿ ಲಸಿಕಾ ಕೇಂದ್ರದಲ್ಲಿ 200-300 ಜನರಿಗೆ ಲಸಿಕೆ ನೀಡಲಾಗುತ್ತಿದೆ. ವಾರ್ಡ್ ಮಟ್ಟದಲ್ಲಿ 1-2 ಲಸಿಕಾ ಕೇಂದ್ರಗಳಿವೆ ಎಂದರು.
ಅಪಾರ್ಟ್ಮೆಂಟ್ ಸಂಘಟನೆ, ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಸ್ಲಂ ಸಂಘಟನೆ ಹೀಗೆ ಎಲ್ಲರೂ ಕೊರೊನಾ ನಿಯಂತ್ರಿಸಲು ಕೈಜೋಡಿಸಿದ್ದಾರೆ. ಸಿಎಂ ಕೂಡ ಈ ಬಗ್ಗೆ ಸಭೆ ನಡೆಸಿ, ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸಲು ಸೂಚನೆ ನೀಡಿದ್ದಾರೆ ಎಂದು ಗೌರವ್ ಗುಪ್ತಾ ತಿಳಿಸಿದರು.