ಬೆಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಅವರ ಸಹೋದರ ಬಿ.ಕೆ.ಶಿವಕುಮಾರ್ ಅವರನ್ನು ಸಹಆರೋಪಿಯನ್ನಾಗಿ ಪರಿಗಣಿಸಬೇಕು ಎಂಬ ಪ್ರಾಸಿಕ್ಯೂಷನ್ ಮನವಿಯನ್ನು ಜನಪ್ರತಿನಿಧಿಗಳ ಕೋರ್ಟ್ ತಿರಸ್ಕರಿಸಿದೆ.
ಶಾಸಕರು,ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣದ ಕುರಿತಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು ಇಂದು ಪ್ರಕಟಿಸಿದರು. ವಿಚಾರಣೆ ವೇಳೆ ಸಂಗಮೇಶ್ ಪರ ವಕೀಲ ಸಿ.ಎಚ್.ಹನುಮಂತರಾಯ ಅವರು ಮಂಡಿಸಿದ್ದ ಆಕ್ಷೇಪಣೆಯನ್ನು ನ್ಯಾಯಾಧೀಶರು ಮಾನ್ಯ ಮಾಡಿದ್ದಾರೆ.
ಸಂಗಮೇಶ್ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು 2010ರ ಮೇ 22ರಂದು ನನ್ನ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಿ.ಕೆ.ಸಂಗಮೇಶ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಮಹೇಶ್ ಕುಮಾರ್ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಗೆ ನೀಡಿರುವ ದೂರು ಇದಾಗಿದೆ.
ನಾಡದೇವತೆ ಉತ್ಸವದಲ್ಲಿ ಸ್ಥಳೀಯ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಕಡೆಗಣಿಸಿ,ನಾನು ಮುಂದಾಳತ್ವ ವಹಿಸಿದ್ದೇನೆ ಎಂಬ ಕಾರಣಕ್ಕೆ ಸಂಗಮೇಶ್ ಮತ್ತು ಅವರ ಕುಟುಂಬದವರು ಈ ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ಕುಮಾರ್ ದೂರಿದ್ದಾರೆ.