ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಹಲವು ಶಾಲೆಗಳು ಶುಲ್ಕ ವಿಚಾರವಾಗಿ ಹಾಲ್ ಟಿಕೆಟ್ ನೀಡಲು ನಿರಾಕರಿಸಿದ್ದು ವರದಿಯಾದ ಬೆನ್ನಲ್ಲೇ, ಪರೀಕ್ಷಾ ಮಂಡಳಿ ಸುತ್ತೋಲೆ ಹೊರಡಿಸಿದೆ.
ಪರೀಕ್ಷೆಗೆ ನೋಂದಾಯಿಸಿಕೊಂಡ ಯಾವುದೇ ವಿದ್ಯಾರ್ಥಿಗೆ ಪ್ರವೇಶ ಪತ್ರವು ಸಕಾಲದಲ್ಲಿ ದೊರೆಯದೇ ಇರುವುದು ಕಂಡುಬಂದರೆ ಅಥವಾ ತಮ್ಮನ್ನು ವಿದ್ಯಾರ್ಥಿಗಳಾಗಲೀ/ಪೋಷಕರಾಗಲೀ ಸಂಪರ್ಕಿಸಿದಲ್ಲಿ ಕೂಡಲೇ ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ವಿತರಿಸಲು ನಿಯಮಾನುಸಾರ ಸೂಕ್ತ ಕ್ರಮವಹಿಸಲಾಗುವುದು ಎಂದು ಎಸ್ಎಸ್ಎಲ್ಸಿ ಬೋರ್ಡ್ ಅಧ್ಯಕ್ಷ ಅನ್ಬುಕುಮಾರ್ ಸುತ್ತೋಲೆ ಹೊರಡಿಸಿದ್ದಾರೆ.
ಈ ಬಗ್ಗೆ ಮಂಡಳಿಯ ಮಾರ್ಗದರ್ಶನದ ಆವಶ್ಯಕತೆ ಕಂಡು ಬಂದಲ್ಲಿ ಕೂಡಲೇ ಮಂಡಳಿಯನ್ನು ಸಂಪರ್ಕಿಸಿ. ಪರೀಕ್ಷೆಗೆ ನೋಂದಾಯಿಸಿಕೊಂಡ ಯಾವುದೇ ವಿದ್ಯಾರ್ಥಿಯು ಪ್ರವೇಶ ಪತ್ರ ಪಡೆಯಲಾಗದೇ ಮಾನಸಿಕ ತೊಂದರೆ ಮತ್ತು ಆತಂಕಕ್ಕೆ ಒಳಗಾಗಬಾರದು. ಹಾಗೆಯೇ ಪರೀಕ್ಷೆಯಿಂದ ವಂಚಿತರಾಗದಂತೆ ಆದ್ಯತೆ ಮೇರೆಗೆ ಕ್ರಮವಹಿಸಲು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಶಾಲಾ ಮುಖ್ಯಸ್ಥರ ಗಮನಕ್ಕೆ ತಂದಿದ್ದಾರೆ.
ಪರೀಕ್ಷೆಗೆ ನೋಂದಾಯಿಸಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ಜೂನ್ 29 ರಂದೇ ಮಂಡಳಿಯ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅಂತಿಮ ಪ್ರವೇಶ ಪತ್ರಗಳನ್ನು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಲಾಗಿನ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸಲು ಸೂಚಿಸಲಾಗಿದೆ.