ಬೆಂಗಳೂರು: ಕೇಂದ್ರ ಸರ್ಕಾರ ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ನಾಯಕರು ಕರೆ ಕೊಟ್ಟಿರುವ ರಾಜಭವನ ಮುತ್ತಿಗೆ ಆರಂಭವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು ಪಾಲ್ಗೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕೈ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಪ್ರತಿಭಟನಾ ಮೆರವಣಿಗೆ 11 ಗಂಟೆಗೆ ಆರಂಭವಾಗಿದ್ದು, ನಿಗದಿತ ಸಮಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸದಿರುವುದೇ ಕಾರಣ. ಕಾಂಗ್ರೆಸ್ ಪಕ್ಷದ ಬಾವುಟ ಹಾಗೂ ಧ್ವಜವನ್ನು ಹಿಡಿದು ವಾಹನಗಳ ಮೂಲಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ಮಧ್ಯದಲ್ಲಿ ತಡೆದು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನ ಮೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ಮೆರವಣಿಗೆ ಮೂಲಕ ತೆರಳಿ ಮುತ್ತಿಗೆ ಹಾಕಲು ಕಾಂಗ್ರೆಸ್ ತೀರ್ಮಾನಿಸಿದ್ದು, ಈ ಮಾರ್ಗವಾಗಿ ಆಗಮಿಸುತ್ತಿದ್ದ ಕಾರ್ಯಕರ್ತರನ್ನು ಮಾರ್ಗದಲ್ಲಿ ತಡೆದು ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆ ಕಾರ್ಯಕರ್ತರ ಆಗಮನ ವಿಳಂಬವಾಯಿತು ಎಂಬ ಮಾಹಿತಿ ಇದೆ.
11ಗಂಟೆ ವೇಳೆಗೆ ಮೆರವಣಿಗೆಗೆ ಚಾಲನೆ: ಅಂತಿಮವಾಗಿ 11ಗಂಟೆಗೆ ಪ್ರತಿಭಟನಾ ಮೆರವಣಿಗೆಗೆ ಚಾಲನೆ ದೊರೆತಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಕೆಪಿಸಿಸಿ ಕಚೇರಿಯಿಂದ ಹೊರಟ ಪ್ರತಿಭಟನಾಕಾರರನ್ನು ಆರಂಭದಲ್ಲೇ ಪೊಲೀಸರು ತಡೆದು ವಶಕ್ಕೆ ಪಡೆಯುತ್ತಾರೆ ಎಂಬ ಮಾಹಿತಿ ಇತ್ತು. ಆದರೆ, ಇದೀಗ ಲಭಿಸಿರುವ ಮಾಹಿತಿ ಪ್ರಕಾರ, ಪ್ರತಿಭಟನಾ ಮೆರವಣಿಗೆಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ಸಮೀಪದ ಬಾಳೆಕುಂದ್ರಿ ವೃತ್ತದವರೆಗೆ ತೆರಳಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಇದೆ.
ಪ್ರತಿಭಟನಾ ಮೆರವಣಿಗೆಗೆ ತೆರಳುವ ಮುನ್ನವೇ ರಾಜ್ಯ ಕಾಂಗ್ರೆಸ್ ನಾಯಕರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದು, ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದೀರಿ, ಸಂಯಮ ಹಾಗೂ ಸೌಜನ್ಯದಿಂದ ನಡೆದುಕೊಳ್ಳಿ. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಮಾಡಿಕೊಡಬೇಡಿ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಮನವಿ ಮಾಡಿಕೊಂಡರು.
ಸುಧಾಕರ್ ಹೇಳಿಕೆಗೆ ಡಿಕೆಶಿ ತಿರುಗೇಟು: ಪ್ರತಿಭಟನೆ ಆರಂಭಕ್ಕೆ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪ್ರತಿಭಟನೆಯಿಂದ ಕೋವಿಡ್ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಸಚಿವ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ್ದು, ಬಿಜೆಪಿಯ ಯಾರು ಯಾರು ಕೋವಿಡ್ ನಿಯಮ ಉಲಂಘನೆ ಮಾಡಿದ್ದಾರೆ ಮೊದಲು ಅವರ ಮೇಲೆ ಕೇಸ್ ಹಾಕಲಿ. ಕಾಂಗ್ರೆಸ್ನವರ ಮೇಲೆ ಮಾತ್ರ ಕೇಸ್ ಹಾಕ್ತಿದ್ದಾರೆ.
ಕೆ.ಎಸ್.ಈಶ್ವರ ಅವರ ಮೇಲೂ ಕೇಸ್ ಹಾಕಿ. ಬಿಜೆಪಿ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ, ಆಗ ಯಾಕೆ ಕೇಸ್ ಹಾಕಿಲ್ಲ. ದೇಶದಲ್ಲಿ ಹೋರಾಟ ಮಾಡುವ ಹಕ್ಕನ್ನ ಸಂವಿಧಾನ ನಮಗೆ ನೀಡಿದೆ. ಇದೇ ಹೋರಾಟದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ರಾಹುಲ್ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕ್ತಿದ್ದಾರೆ. ಬಿಜೆಪಿ ನಮ್ಮನ್ನು ಹೆದರಿಸುವ ಬೆದರಿಸುವ ಕೆಲಸ ಮಾಡಿ, ದ್ವೇಷದ ರಾಜಕಾರಣ ಮಾಡ್ತಿದೆ. ನ್ಯಾಷನಲ್ ಹೆರಾಲ್ಡ್ ಕಾಂಗ್ರೆಸ್ ಪಾರ್ಟಿಯ ಆಸ್ತಿ. ಯಂಗ್ ಇಂಡಿಯಾ ಕೂಡ ಕಾಂಗ್ರೆಸ್ ಆಸ್ತಿ ಎಂದರು.
ಕಾಂಗ್ರೆಸ್ ದೇವಾಲಯಕ್ಕೆ ಪ್ರವೇಶ ನೀಡದ ಇಂತಹ ನೀಚ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಎಐಸಿಸಿ ಕಚೇರಿಯ ಪ್ರವೇಶಕ್ಕೆ ಅವಕಾಶ ನೀಡಲು ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸಿದೆ. ನಾವು ನ್ಯಾಯಯುತ ಹೋರಾಟಕ್ಕೆ ಮುಂದಾಗಿದ್ದು, ನಮ್ಮ ರಾಷ್ಟ್ರೀಯ ನಾಯಕರ ವಿರುದ್ಧ ಕೇಂದ್ರ ಸರ್ಕಾರದ ಪಿತೂರಿಯನ್ನು ಜನರ ಮುಂದೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದ್ದೇವೆ. ಇಂದು ಯಾರೇ ತಡೆಗಟ್ಟಿದರು ರಾಜಭವನ ಮುತ್ತಿಗೆಯನ್ನು ನಿಲ್ಲಿಸುವುದಿಲ್ಲ ಎಂದರು.
ಹೋರಾಟಗಾರರಿಗೆ ಸರ್ಕಾರದ ಕಿರುಕುಳ ಆರೋಪ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ ಕುಟುಂಬ ನಂತರದ ದಿನಗಳಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದೆ. ದೇಶಕ್ಕಾಗಿ ಯಾವುದೇ ಸಾಧನೆ ಮಾಡದ ಬಿಜೆಪಿ ಸರ್ಕಾರ ಇಂದು ನಿಜವಾದ ಹೋರಾಟಗಾರರಿಗೆ ಕಿರುಕುಳ ನೀಡುತ್ತಿದೆ. ಇದನ್ನು ನಾವು ಖಂಡಿಸಲೇ ಬೇಕಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರ ತನ್ನ ತನಿಖಾ ಸಂಸ್ಥೆ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಅನಗತ್ಯ ಕಿರುಕುಳ ನೀಡುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ ಹರಿಪ್ರಸಾದ್ ಮಾತನಾಡಿ, ಎಐಸಿಸಿ ಕಚೇರಿಯಲ್ಲಿ ನಮ್ಮ ಸಂಸದರು, ಮಾಜಿ ಸಿಎಂಗಳನ್ನು ಬಂಧಿಸಿದ್ದಾರೆ. ನಮ್ಮ ನಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ಎಐಸಿಸಿ ಕಚೇರಿಯಲ್ಲಿ 200 ಕ್ಕೂ ಹೆಚ್ಚು ಮಂದಿ ಕೆಲಸ ಮಾಡ್ತಾರೆ. ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಮೋದಿಗೆ 56 ಇಂಚಿನ ಎದೆ ಇದ್ದರೆ ರಾಜಕೀಯವಾಗಿ ಫೇಸ್ ಮಾಡಲಿ. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು. ಇದು ನರಹೇಡಿ ಸರ್ಕಾರ. ಆರ್ಎಸ್ಎಸ್ ದೇಶದಲ್ಲಿ ಶ್ರೀಮಂತ ಎನ್ಜಿಒ. ಆರ್ಎಸ್ಎಸ್ ಆದಾಯದ ಮೂಲ ಯಾವುದು. ಯತ್ನಾಳ್ ಸಿಎಂ ಆಗಲು 2,500 ಕೋಟಿ ಬೇಕು ಎಂದಾಗ ಇಡಿ ವಿಚಾರಣೆ ಆಯಿತಾ. ಬೊಮ್ಮಾಯಿ ಸೇರಿದಂತೆ ಕೆಲವರ ಮೇಲೆ ಬಿಟ್ ಕಾಯಿನ್ ಆರೋಪ ಬಂತು. ಅದರ ಮೇಲೆ ಇಡಿ ವಿಚಾರಣೆ ಆಯಿತಾ ಎಂದರು.
ಇದು ಪ್ರಜಾತಂತ್ರ ಉಳಿವಿಗಾಗಿ ಹೋರಾಟ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ರಾಷ್ಟ್ರೀಯ ನಾಯಕರ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಕಿರುಕುಳದ ವಿರುದ್ಧ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಕೆಪಿಸಿಸಿ ವತಿಯಿಂದ ಇಂದು ರಾಜಭವನ ಮುತ್ತಿಗೆ ಹಮ್ಮಿಕೊಂಡಿದ್ದೇವೆ. ನಮ್ಮ ಆಕ್ರೋಶವನ್ನು ಈ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದೇವೆ. ಸಂವಿಧಾನ ಹಾಗೂ ಪ್ರಜಾತಂತ್ರವನ್ನು ಉಳಿಸುವುದಕ್ಕೋಸ್ಕರ ಮತ್ತು ದೇಶದ ಸ್ವಾಭಿಮಾನ ಉಳಿಸುವುದಕ್ಕೋಸ್ಕರ ಹೋರಾಟದಲ್ಲಿ ಭಾಗಿಯಾಗಿದ್ದೇವೆ ಎಂದರು.
ಇದನ್ನೂ ಓದಿ: ಕೊರೊನಾ ಹೆಚ್ಚಳಕ್ಕೆ ಕಾಂಗ್ರೆಸ್ ಹೊಣೆ, ನಿಯಮ ಉಲ್ಲಂಘನೆಯಡಿ ಕೇಸ್ ದಾಖಲಿಸುವ ಕುರಿತು ಸಿಎಂ ಜೊತೆ ಚರ್ಚೆ: ಸುಧಾಕರ್