ಬೆಂಗಳೂರು: ಬಿಬಿಎಂಪಿ ವಾರ್ಡ್ಗಳ ಮರು ವಿಂಗಡಣೆಯಲ್ಲಿ ಆಡಳಿತ ಪಕ್ಷ ಬಿಜೆಪಿಯ ಹಸ್ತಕ್ಷೇಪ, ಅಧಿಕಾರ ದುರುಪಯೋಗ ಹಾಗೂ ಪಾಲಿಕೆ ಮರುವಿಂಗಡಣಾ ಸಮಿತಿಯ ನಿಷ್ಕ್ರಿಯತೆಯನ್ನು ಖಂಡಿಸಿ ಇಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳನ್ನು 243 ವಾರ್ಡ್ಗಳಾಗಿ ಮಾಡುತ್ತಿದ್ದಾರೆ, ಬಿಜೆಪಿ ಪಕ್ಷದ ನಾಯಕರು ತಮಗೆ ಬೇಕಾದಂತೆ ವಾರ್ಡ್ ವಿಂಗಡಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದರು.
ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳಲ್ಲಿ ವಾರ್ಡ್ ವಿಂಗಡಣೆ ಹೆಸರಲ್ಲಿ ವಾರ್ಡ್ ವಿಭಜನೆ ಮಾಡಿ, ಈ ಬಾರಿ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಬಿಜೆಪಿಯ ಎಂಎಲ್ಎ ಇರುವ ಕ್ಷೇತ್ರದಲ್ಲಿ ಹೆಚ್ಚು ವಾರ್ಡ್ ಆಗಿ ಮಾರ್ಪಾಡು ಮಾಡಲಾಗ್ತಿದೆ. ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ವಾರ್ಡ್ ವಿಂಗಡಣೆ ಆಗಿದೆ. ವಾರ್ಡ್ ವಿಂಗಡಣೆ ಸಮಿತಿ ನಿಷ್ಕ್ರಿಯವಾಗಿದೆ. ಬಿಜೆಪಿ ಅಣತಿಯಂತೆ ಕೆಲಸ ಆಗ್ತಿದೆ. ಸಮಿತಿಯ ಸದಸ್ಯರು ಬಿಜೆಪಿ ನಾಯಕರು ಹೇಳಿದಂತೆ ವಾರ್ಡ್ ವಿಂಗಡಣೆ ಮಾಡುತ್ತಿದ್ದಾರೆ. ಹೆಸರಿಗೆ ಮಾತ್ರ ಪಾಲಿಕೆ, ಕಂದಾಯ ಅಧಿಕಾರಿಗಳು ವಾರ್ಡ್ ವಿಂಗಡಣೆಯ ಜವಾಬ್ದಾರಿ, ಅದ್ರೆ ಬಹುತೇಕ ವಾರ್ಡ್ ವಿಂಗಡಣೆ ಬಿಜೆಪಿ ಮುಖಂಡರ ಅಣತಿ ಮೇರೆಗೆ ನಡೆಯುತ್ತಿದೆ ಅಂತ ಆರೋಪ ಮಾಡಿದರು.
ವಾರ್ಡ್ ವಿಂಗಡಣೆ ಸಮಿತಿ ಹಾಗೂ ಬಿಜೆಪಿ ವಿರುದ್ಧ ಇಂದು ಶಾಸಕ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯ್ತು.
ಇದನ್ನೂ ಓದಿ: ಹಾಫ್ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರನಿಂದ ಹಣ ವಸೂಲಿ ವಿಡಿಯೋ ವೈರಲ್: ಕಾನ್ಸ್ಟೇಬಲ್ ಅಮಾನತು
ಬಳಿಕ ಮಾತಾನಾಡಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಬಿಬಿಎಂಪಿ ಚುನಾವಣೆ ನಡೆಯಬೇಕಿದ್ದು, ಬಿಜೆಪಿಯವರು ಆರ್ಎಸ್ಎಸ್ ಕಚೇರಿಯಲ್ಲಿ ಕೂತು ತಮಗೆ ಬೇಕಾದ ರೀತಿ ಪುನರ್ ವಿಂಗಡನೆ ಚರ್ಚೆ ಮಾಡುತ್ತಿದ್ದಾರೆ. ವಾರ್ಡ್ ವಿಂಗಡಣೆ ಖಂಡನೀಯ. ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಏನು ಬೇಕಾದರೂ ಬಿಜೆಪಿ ಪಕ್ಷ ಮಾಡುತ್ತದೆ. ಅದೇ ರೀತಿ ಈಗಲೂ ಕಾಂಗ್ರೆಸ್ ವಾರ್ಡ್ ಗಳನ್ನು ಚೂರು ಚೂರು ಮಾಡಲಾಗ್ತಿದೆ.
ಕಳೆದ ಬಾರಿ ಕಾಂಗ್ರೆಸ್ ವಾರ್ಡ್ಗಳ ಮರುವಿಂಗಡಣೆ ಕಾನೂನು ಬದ್ಧವಾಗಿ ಮಾಡಿದೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಸೇರಿ ಮರುವಿಂಗಡಣೆ ಮಾಡಿದ್ದರು. ಆದರೆ ಈ ಬಾರಿ ಬಿಜೆಪಿ ಕಚೇರಿಯಲ್ಲಿ ಮರು ವಿಂಗಡಣೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಜಾಬ್ ವಿವಾದ: ಕರಾವಳಿಯಲ್ಲಿ ಬಿಜೆಪಿಯವರು ಹಿಜಾಬ್ ವಿವಾದ ಹುಟ್ಟು ಹಾಕಿದ್ದಾರೆ. ದೆಹಲಿಯಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಹೊರಗಿಡಲಾಗಿತ್ತು. ಅದಕ್ಕೆ ವಿರುದ್ಧವಾಗಿ ಕರಾವಳಿಯಲ್ಲಿ ಬಜರಂಗದಳದವರೇ ಪ್ರತಿಭಟನೆ ಮಾಡಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಹಿಜಾಬ್ ವಿಚಾರ ಮುನ್ನೆಲೆಗೆ ಬಂದಿದೆ. ಈ ಸೂಕ್ಷ್ಮ ವಿಚಾರ ಅರ್ಥ ಮಾಡಿಕೊಂಡರೆ ಅದರ ಹಿಂದಿನ ಅಜೆಂಡಾ ಗೊತ್ತಾಗುತ್ತದೆ. ವಿದ್ಯಾರ್ಥಿನಿಯರನ್ನು ಗೇಟ್ ಹೊರಗಡೆ ನಿಲ್ಲಿಸಿದ ಪ್ರಿನ್ಸಿಪಾಲ್ ಅವರನ್ನು ಕೂಡಲೇ ಅಮಾನತು ಮಾಡಬೇಕು. ಇದು ಬಿಜೆಪಿ ನಡೆಸುತ್ತಿರುವ ಕುತಂತ್ರ ಎಂದು ಆರೋಪಿಸಿದರು.
ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆ ಬಿಬಿಎಂಪಿಯಲ್ಲಿ ಪೊಲೀಸ್ ಭದ್ರತೆ ನಿಯೋಜಿಲಾಗಿದೆ. ಎರಡು ಕೆಎಸ್ಆರ್ಪಿ ತುಕಡಿ ಜೊತೆಗೆ ಎರಡು ಬಿಎಂಟಿಸಿ ಬಸ್ಗಳನ್ನೂ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.