ಬೆಂಗಳೂರು: ಹಾನಗಲ್ ನೂತನ ಶಾಸಕ ಕಾಂಗ್ರೆಸ್ನ ಶ್ರೀನಿವಾಸ್ ಮಾನೆ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Congress Mla Shrinivas mane meet cm bommai) ಅವರನ್ನು ಮಂಗಳವಾರ ಆರ್.ಟಿ ನಗರದಲ್ಲಿರುವ ಸಿಎಂ ನಿವಾಸದಲ್ಲಿ ಭೇಟಿ ಮಾಡಿ ಕ್ಷೇತ್ರದ ಅಭಿವೃದ್ಧಿ ಕುರಿತು (discussed on development issues) ಚರ್ಚಿಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀನಿವಾಸ್ ಮಾನೆ, ಹಾನಗಲ್ ಕ್ಷೇತ್ರದ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಿಎಂ ತಿಳಿಸಿದ್ದಾರೆ ಎಂದು ಹೇಳಿದರು.
ಉಪ ಚುನಾವಣೆ ಫಲಿತಾಂಶದ ಬಳಿಕ ಸಿಎಂ ಬೊಮ್ಮಾಯಿ ಅವರನ್ನು ಆತ್ಮೀಯವಾಗಿ ಭೇಟಿಯಾಗಿದ್ದೇನೆ. ನಾನು ಅವರು ಒಂದೇ ಕ್ಷೇತ್ರದಿಂದ ಬಂದಿದ್ದೇವೆ. ಅನೇಕ ವರ್ಷಗಳಿಂದ ಅವರ ಜೊತೆ ಆತ್ಮೀಯತೆ ಹೊಂದಿದ್ದೇನೆ. ನಾನು ಗೌರವಿಸುವ ವ್ಯಕ್ತಿಗಳಲ್ಲಿ ಬೊಮ್ಮಾಯಿ ಕೂಡ ಒಬ್ಬರು. ಹಾನಗಲ್ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದರು.
ಬಿಟ್ ಕಾಯಿನ್ ವಿಚಾರ ಸದ್ದು ಮಾಡುತ್ತಿರುವ ಬೆನ್ನಲ್ಲೇ ಸಿಎಂ ಭೇಟಿ ಕಾಂಗ್ರೆಸ್ಸಿಗರ ಕೆಂಗಣ್ಣಿಗೆ ಗುರಿಯಾಗೋದಿಲ್ವಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮಾನೆ, ರಾಜಕಾರಣವೇ ಬೇರೆ, ಆಡಳಿತವೇ ಬೇರೆ. ಬಿಟ್ ಕಾಯಿನ್ ವಿಚಾರವೇ ಬೇರೆ, ನನ್ನ ಭೇಟಿಯ ವಿಚಾರವೇ ಬೇರೆ. ಶಾಸಕನಾಗಿ ಮುಖ್ಯಮಂತ್ರಿಯನ್ನು ಭೇಟಿಯಾಗುವುದು ನನ್ನ ಕರ್ತವ್ಯ. ಕ್ಷೇತ್ರದ ಅಭಿವೃದ್ಧಿಯಾಗಬೇಕು. ಈ ನಿಟ್ಟಿನಲ್ಲಿ ಮಾತ್ರ ನಾನು ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೇನೆ ಎಂದು ಇದೇ ವೇಳೆ ಅವರು ಸ್ಪಷ್ಟನೆಯನ್ನೂ ಕೊಟ್ಟರು.