ಬೆಂಗಳೂರು: ಹೈಕಮಾಂಡ್ ನಾಯಕರ ಬುಲಾವ್ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ರಾಜ್ಯ ನಾಯಕರು ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ನಾಯಕರು ಪ್ರಯಾಣ ಬೆಳೆಸಿದ್ದು, ವಿವಿಧ ಮಹತ್ವದ ವಿಚಾರಗಳ ಮೇಲೆ ಹೈಕಮಾಂಡ್ ನಾಯಕರ ಜೊತೆ ಇಂದು ಚರ್ಚೆ ನಡೆಸಲಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ತೆರಳಿದ ಡಿಕೆಶಿ ಬಳಿಕ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದಾರೆ. ರಾಜ್ಯದಲ್ಲಿ ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಒಂದಷ್ಟು ಸಲಹೆ ನೀಡುವ ಉದ್ದೇಶದಿಂದ ಪಕ್ಷದ ಹೈಕಮಾಂಡ್ ನಾಯಕರು ಇಂದಿನ ಸಭೆಗೆ ಆಹ್ವಾನಿಸಿದ್ದಾರೆ.
ಮಧ್ಯಾಹ್ನ 12:30ಕ್ಕೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಈ ವೇಳೆ ಉಪಸ್ಥಿತರಿರುತ್ತಾರೆ. ಸಭೆಯ ಬಳಿಕ ಇನ್ನಷ್ಟು ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಚರ್ಚಿಸಲಿರುವ ಕಾಂಗ್ರೆಸ್ ನಾಯಕರು, ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಅಗತ್ಯವಿರುವ ಎಲ್ಲ ವಿಧದ ಮಾರ್ಗದರ್ಶನ ಪಡೆದು ನಾಳೆ ವಾಪಸ್ಸಾಗಲಿದ್ದಾರೆ.
ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ಪುಟಿನ್!