ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ ಬಿ ಪಾಟೀಲ್ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿದೆ.
ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಎಂ ಬಿ ಪಾಟೀಲ್, ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ನಿವಾಸಕ್ಕೆ ಬಂದ ಕಾಂಗ್ರೆಸ್ ನಾಯಕನನ್ನು ಸಿಎಂ ಆತ್ಮೀಯವಾಗಿ ಬರಮಾಡಿಕೊಂಡರು. ಸೌಹಾರ್ದಯುತವಾಗಿ ಕೆಲಕಾಲ ಮಾತುಕತೆ ನಡೆಸಿದರು.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ನಂತರ ಕಾಂಗ್ರೆಸ್ನಲ್ಲಿ ಮೂಲೆ ಗುಂಪಾಗುತ್ತಿರುವ ಎಂ.ಬಿ ಪಾಟೀಲ್ರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎನ್ನುವ ಮಾತುಗಳು ಆಗಾಗ ಕೇಳಿ ಬರುತ್ತಲೇ ಇವೆ. ಶಂಕರ್ ಬಿದರಿ ಮೂಲಕ ಮೊದಲ ಬಾರಿ ಬಿಜೆಪಿಗೆ ಕರೆ ತರುವ ಪ್ರಯತ್ನ ನಡೆದಿತ್ತು ಎನ್ನಲಾಗಿತ್ತು. ನಂತರ ವಿಧಾನಸಭೆ ಚುನಾವಣೆ ನಂತರವೂ ಮತ್ತೊಮ್ಮೆ ಬಿಜೆಪಿ ಸೇರ್ಪಡೆ ಸುದ್ದಿ ಹರಿದಾಡಿತ್ತು.
ಆಗ ಎಂಬಿ ಪಾಟೀಲ್ ಸ್ಪಷ್ಟೀಕರಣ ನೀಡಿ, ನನ್ನನ್ನು ಬಿಜೆಪಿಯ ಯಾರೂ ಸಂಪರ್ಕ ಮಾಡಿಲ್ಲ. ಬಿಜೆಪಿ ಸೇರುವ ಸುದ್ದಿ ಸತ್ಯಕ್ಕೆ ದೂರ ಎಂದಿದ್ದರು. ಇದೀಗ ಸ್ವತಃ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಕುಡಿದು ಬಂದು ಮನೆಯಲ್ಲಿ ನಿತ್ಯ ಗಲಾಟೆ : ತಾಯಿ ಜತೆಗೂಡಿ ತಂದೆಯ ಹತ್ಯೆ!