ಬೆಂಗಳೂರು: ಸಿಲಿಕಾನ್ ಸಿಟಿಯ ಹೈಫೈ ರಸ್ತೆ ಚರ್ಚ್ ಸ್ಟ್ರೀಟ್ಗೆ ಇನ್ಮುಂದೆ ವೀಕೆಂಡ್ನ ಎರಡು ದಿನ ವಾಹನಗಳಿಗೆ ಎಂಟ್ರಿ ಇರೋದಿಲ್ಲ. ಇಂದು ಚರ್ಚ್ ಸ್ಟ್ರೀಟ್ ಸ್ವಚ್ಛ ವಾಯುರಸ್ತೆ ಯೋಜನೆಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.
ಭೂ ಸಾರಿಗೆ ನಿರ್ದೇಶನಾಲಯ, ಡಲ್ಟ್( ಡೈರೆಕ್ಟರ್ ಆಫ್ ಅರ್ಬನ್ ಲಾಂಡ್ ಟ್ರಾನ್ಸ್‌ಪೋರ್ಟ್) ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಿಬಿಎಂಪಿ ಆಡಳಿತಗಾರರಾದ ಗೌರವ್ ಗುಪ್ತಾ, ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಸಾರಿಗೆ ಇಲಾಖೆ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯ್ ಕುಮಾರ್ ಗೋಗಿ ಭಾಗಿಯಾಗಿದ್ದರು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಬಿಎಸ್ವೈ, ಸ್ವಚ್ಛ ವಾಯು ಯೋಜನೆಗೆ ಚರ್ಚ್ ಸ್ಟ್ರೀಟ್ ಅನ್ನು ಆಯ್ಕೆ ಮಾಡಲಾಗಿದೆ. ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಈ ಕಾರ್ಯಕ್ರಮ. ವಾಯುಗುಣಮಟ್ಟ ಸುಧಾರಿಸಲು ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲಾಗುತ್ತದೆ. ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಎಲ್ಲ ರೀತಿಯ ವಾಹನ ಸಂಚಾರ ನಿಷೇಧಿಸಿ, ಪಾದಚಾರಿಗಳ ಓಡಾಟಕ್ಕೆ ಮಾತ್ರ ಅವಕಾಶ ಇರಲಿದೆ ಎಂದರು.
ಆಯುಕ್ತರಾದ ಮಂಜುನಾಥ್ ಪ್ರಸಾದ್ ಮಾತನಾಡಿ, ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ ಬಳಿಕ ಮೊದಲಿಂದಲೂ ಜನಸಂಚಾರಕ್ಕೆ ಮಾತ್ರ ಅವಕಾಶ ಕೊಡಲು ನಿರ್ಧಾರ ಆಗಿತ್ತು. ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳ ಜೊತೆ ಸಮನ್ವಯ ಮಾಡಿಕೊಂಡು ಶನಿವಾರ ಹಾಗೂ ಭಾನುವಾರ ಬೆಳಗ್ಗೆ 10 ರಿಂದ ರಾತ್ರಿ 12 ರವರೆಗೆ ವಾಹನ ಓಡಾಟಕ್ಕೆ ನಿರ್ಬಂಧ ವಹಿಸಲಾಗಿತ್ತು. ಸ್ಥಳೀಯ ನಿವಾಸಿಗಳ ವಾಹನ ಹಾಗೂ ತುರ್ತು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಾಲಿನ್ಯದ ಪ್ರಮಾಣ ಪರಿಶೀಲಿಸಿ ಕಮರ್ಶಿಯಲ್ ಸ್ಟ್ರೀಟ್ ಸೇರಿದಂತೆ ಬೇರೆ ರಸ್ತೆಗಳಲ್ಲೂ ಇದೇ ಮಾದರಿ ಜಾರಿಗೆ ತರಲಾಗುತ್ತದೆ ಎಂದರು.