ಬೆಂಗಳೂರು: ಕೊರೊನಾ ನಿಯಂತ್ರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆದಿರುವ ಬೆಂಗಳೂರು ಜನಪ್ರತಿನಿಧಿಗಳ ಸಭೆಗೆ ಆಗಮಿಸುವವರು ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಸಿಎಂ ಕಚೇರಿಯಿಂದ ಸೂಚನೆ ನೀಡಲಾಗಿದೆ.
ನಗರದ ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ನಾಳೆ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಸಂಸದರು ಹಾಗೂ ಎಲ್ಲಾ ವಾರ್ಡ್ಗಳ ಪಾಲಿಕೆ ಸದಸ್ಯರ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಲಿರುವ ಸಭೆಗೆ ಆಗಮಿಸುವಂತೆ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳಿಗೆ ಸಿಎಂ ಕಚೇರಿಯಿಂದ ಆಹ್ವಾನ ಕಳಿಸಲಾಗಿದ್ದು, ಜೊತೆಗೆ ಕೋವಿಡ್-19 ಮಾರ್ಗಸೂಚಿ ಪಾಲನೆ ಕಡ್ಡಾಯ ಎನ್ನುವ ಸೂಚನೆ ನೀಡಲಾಗಿದೆ.
ಜನಪ್ರತಿನಿಧಿಗಳ ಸಭೆಗೆ ಬರುವವರಿಗೆ ಸೂಚನೆಗಳು
- ಆಹ್ವಾನಿತರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು
- ಆಹ್ವಾನಿತರಷ್ಟೇ ಸಭೆಗೆ ಆಗಮಿಸಬೇಕು
- ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
- ಸಭೆಗೆ ಬರುವವರು ತಮ್ಮೊಂದಿಗೆ ಯಾರನ್ನೂ ಕರೆ ತರಬಾರದು
ಇತ್ತೀಚಿನ ದಿನಗಳಲ್ಲಿ ಸಭೆಗಳ ವೇಳೆ ಕೆಲವರು ಮಾಸ್ಕ್ ಧರಿಸದೆ ಇರುವುದು, ಸಾಮಾಜಿಕ ಅಂತರ ಕಾಪಾಡದೇ ಇರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾಗಿ ಕೊರೊನಾ ಮಾರ್ಗಸೂಚಿ ಪಾಲಿಸಲು ಸಿಎಂ ಕಚೇರಿಯಿಂದ ಈ ಸೂಚನೆ ಹೊರ ಬಿದ್ದಿದೆ.