ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಕಡೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಯಾವಕಾಶ ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈ ಸಭೆಯ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಅಮಿತ್ ಶಾ ಜೊತೆ ಸಿಎಂ ಸಭೆ ಇರುವ ಸುದ್ದಿ ತಿಳಿಯುತ್ತಿದ್ದಂತೆ ಆಕಾಂಕ್ಷಿಗಳ ಚಿತ್ತ ದೆಹಲಿ ಸಭೆಯತ್ತ ನೆಟ್ಟಿದೆ.
ಹೂಡಿಕೆದಾರ ರಾಷ್ಟ್ರಗಳ ರಾಯಭಾರಿ ಸಮಾವೇಶದಲ್ಲಿ ಭಾಗಿಯಾಗಲು ನವದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಬೊಮ್ಮಾಯಿ, ಇಂದು ಮಧ್ಯಾಹ್ನ 12.30ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಪುಟ ವಿಚಾರದ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.
ಸದ್ಯ ಸಂಪುಟದಲ್ಲಿ ಐದು ಸ್ಥಾನ ಖಾಲಿ ಇದ್ದು, ಸಂಪುಟ ವಿಸ್ತರಣೆ ಮಾಡಬೇಕೋ, ಪುನಾರಚನೆ ಮಾಡಬೇಕೋ, ಒಂದು ವೇಳೆ ಪುನಾರಚನೆ ಮಾಡಿದಲ್ಲಿ ಯಾರನ್ನು ಕೈ ಬಿಡಬೇಕು, ಯಾರಿಗೆಲ್ಲಾ ಅವಕಾಶ ನೀಡಬೇಕು ಎನ್ನುವ ಕುರಿತು ಚರ್ಚೆಯಾಗಲಿದೆ. ಈಗಾಗಲೇ ವಿಸ್ತರಣೆ ಅಥವಾ ಪುನಾರಚನೆ ಎರಡಕ್ಕೂ ಪೂರಕವಾಗಿ ಪಟ್ಟಿ ಸಿದ್ದಪಡಿಸಲಾಗಿದ್ದು ಹೈಕಮಾಂಡ್ಗೂ ಸಲ್ಲಿಕೆ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯ ಸಂಪುಟ ವಿಸ್ತರಣೆ ಆಗುತ್ತಾ? ಹೈಕಮಾಂಡ್ ಲೆಕ್ಕಾಚಾರವೇನು?
ಹೈಕಮಾಂಡ್ ನಾಯಕರು ಕೂಡ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ತಮ್ಮದೇ ಆದ ಮೂಲಗಳಿಂದ ಸಮೀಕ್ಷಾ ವರದಿ ಪಡೆದುಕೊಂಡಿದ್ದಾರೆ. ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ಲಾಭದಾಯಕವಾಗುವ ಕ್ಯಾಬಿನೆಟ್ ರಚನೆ ಕುರಿತು ನಿರ್ಧಾರ ಹೊರಬೀಳಲಿದೆ ಎನ್ನಲಾಗುತ್ತಿದೆ. ಹಾಗಾಗಿ ಇಂದಿನ ಸಿಎಂ ಬೊಮ್ಮಾಯಿ ಅವರ ಅಮಿತ್ ಶಾ ಭೇಟಿ ತೀವ್ರ ಕುತೂಹಲ ಮೂಡಿಸಿದೆ. ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಡಜನ್ ದಾಟಿದ್ದು, ಎಲ್ಲರೂ ಅವಕಾಶದ ನಿರೀಕ್ಷೆಯಲ್ಲಿ ಹೈಕಮಾಂಡ್ ನಿರ್ಧಾರವನ್ನೇ ಎದುರು ನೋಡುತ್ತಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳು: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬೆಳಗಾವಿ ರಮೇಶ್ ಜಾರಕಿಹೊಳಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಕುಡಚಿ ಶಾಸಕ ಪಿ.ರಾಜೀವ್, ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಕೃಷ್ಣರಾಜ ಶಾಸಕ ಎಸ್.ಎ.ರಾಮದಾಸ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸುರಪುರ ಶಾಸಕ ರಾಜೂಗೌಡ, ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸೇರಿದಂತೆ ಇವರೆಲ್ಲರೂ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಯಾರಿಗೆ ಕೋಕ್ ಸಾಧ್ಯತೆ?: ಸಿ.ಸಿ.ಪಾಟೀಲ್, ಪ್ರಭು ಚೌಹಾಣ್, ಕೋಟಾ ಶ್ರೀನಿವಾಸ ಪೂಜಾರಿ, ಬಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಸಾಧ್ಯತೆ ಇದೆ.