ಬೆಂಗಳೂರು: ರಾಜ್ಯದಲ್ಲಿ ಹಿಜಬ್- ಕೇಸರಿ ಸಂಘರ್ಷದಿಂದಾಗಿ ಶಾಲೆ ಬಂದ್ ಮಾಡದಂತೆ ಹೈಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ ಸೋಮವಾರದಿಂದ 10 ನೇ ತರಗತಿವರೆಗೆ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವರು, ಗೃಹ ಸಚಿವರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಹೈಕೋರ್ಟ್ ಶಾಲಾ ಕಾಲೇಜು ಆರಂಭಕ್ಕೆ ಸೂಚಿಸಿದ ಕಾರಣ ಸೋಮವಾರ ಮೊದಲ ಹಂತದಲ್ಲಿ 10 ನೇ ತರಗತಿವರೆಗೆ ಶಾಲೆ ಆರಂಭಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಹಿಜಬ್- ಕೇಸರಿ ಘರ್ಷಣೆಯಿಂದಾಗಿ ಮಕ್ಕಳಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸರ್ಕಾರ 3 ದಿನ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಆದರೆ, ಹಿಜಬ್-ಕೇಸರಿ ಪ್ರಕರಣ ಕುರಿತು ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ಶಿಕ್ಷಣ ಕೇಂದಗಳನ್ನು ಮುಚ್ಚದಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸೋಮವಾರ ಪುನಾರಂಭಿಸಲಾಗುವುದು ಎಂದರು.
ಸೋಮವಾರದಿಂದ ಮೊದಲ ಹಂತವಾಗಿ 10 ನೇ ತರಗತಿವರೆಗೆ ಶಾಲೆ ಆರಂಭಿಸಿ, ನಂತರ ಡಿಗ್ರಿ, ಪಿಯು ಕಾಲೇಜುಗಳನ್ನು ಶುರು ಮಾಡಲಾಗುವುದು. ನಾಳೆ ಸಂಜೆ ಎಲ್ಲಾ ಸಚಿವರ, ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಆಯಾ ಜಿಲ್ಲೆಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲಾಗುವುದು. ಬಳಿಕ ಎಲ್ಲಾ ಶಾಲಾ- ಕಾಲೇಜು ಆರಂಭಿಸಲು ನಿರ್ಧರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.
ಕಳೆದ ಹಲವು ದಿನದಿಂದ ಈ ವಿಚಾರ ಚರ್ಚೆಯಲ್ಲಿದೆ. ಹೈಕೋರ್ಟ್ನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಶಾಂತಿ ಕಾಪಾಡಲು ಸೂಚಿಸಿದೆ. ಇಂದು ಕೂಡ ಅದೇ ಮಾತನ್ನು ನ್ಯಾಯಾಲಯ ಹೇಳಿದೆ. ಮಕ್ಕಳು ಶಾಲಾ ಕಾಲೇಜು ಆವರಣದಲ್ಲಿ ಸಂಯಮದಿಂದ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮೊದಲು ಸಿಂಗಲ್ ಬೆಂಚ್ ಮುಂದೆ ವಿಚಾರಣೆ ಬಂದಿತ್ತು. ಈಗ ಮೂವರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆದೇಶ ಆಗಿದೆ. ಧಾರ್ಮಿಕ ಬಟ್ಟೆ ಹಾಕೊದು ಬೇಡ ಅಂತ ಪೀಠ ಹೇಳಿದೆ. ಹೀಗಾಗಿ ನಮ್ಮ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳುತ್ತದೆ. ಒಂದು ಕಡೆ ಶಾಲಾ ಆವರಣದಲ್ಲಿ ಶಾಂತಿ ಕಾಪಾಡಬೇಕಿದೆ. ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಇರಬೇಕಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರ ಜೊತೆ ನಾವು ಸಂಪರ್ಕ ಸಾಧಿಸುತ್ತೇವೆ. ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಗಮನ ನೀಡುತ್ತೇವೆ ಎಂದು ತಿಳಿಸಿದರು.
ಓದಿ: ಅಂತಿಮ ಆದೇಶ ಬರುವವರೆಗೂ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಬ್ - ಕೇಸರಿ ಶಾಲು ಧರಿಸುವಂತಿಲ್ಲ - ಹೈಕೋರ್ಟ್