ಬೆಂಗಳೂರು: ಕೂಡಲ ಸಂಗಮವು ಜನಾಕರ್ಷಣೆಯ ತಾಣವಾಗಬೇಕು ಹಾಗೂ ಬಸವ ತತ್ವದ ಅರಿವು ಮೂಡಿಸಬೇಕು. ಇದಕ್ಕೆ ಪೂರಕವಾಗಿ ಕೂಡಲಸಂಗಮವನ್ನು ಅಭಿವೃದ್ಧಿ ಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಸಭೆ ಇಂದು ನಡೆಯಿತು. ಸಭೆಯಲ್ಲಿ ಸಿವಿಲ್ ಕಾಮಗಾರಿಗಳ ಜೊತೆಗೆ ಕೂಡಲ ಸಂಗಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮ್ಯೂಸಿಯಂನಲ್ಲಿ ಬಸವಣ್ಣನವರ ಜೀವನಚರಿತ್ರೆ, ಅವರ ವಿಚಾರಧಾರೆ ಹಾಗೂ ಅವರ ಸಮಕಾಲೀನ ಶರಣರ ಕುರಿತ ಮಾಹಿತಿಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಸಲು ಸಿಎಂ ಸೂಚಿಸಿದರು.
ಇದಕ್ಕೆ ಅತ್ಯುತ್ತಮ ಮ್ಯೂಸಿಯಂ ಕ್ಯುರೇಟರ್ ಅವರನ್ನು ನೇಮಕ ಮಾಡಿಕೊಳ್ಳುವಂತೆ ತಿಳಿಸಿ, ಮುಂದಿನ ಮೇ ಅಂತ್ಯದೊಳಗೆ ಮೊದಲ ಹಂತವನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಬಸವ ಅಂತಾರಾಷ್ಟ್ರೀಯ ಕೇಂದ್ರದ ಕಟ್ಟಡದ ಪರಿಷ್ಕೃತ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಪರಿಷ್ಕೃತ ಅಂದಾಜನ್ನು ಅನುಮೋದನೆಗಾಗಿ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದರು. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ದೇವಸ್ಥಾನ ಹಾಗೂ ಮಾರಾಟ ಮಳಿಗೆಗಳು ಮುಚ್ಚಿದ್ದವು. ಈ ಹಿನ್ನೆಲೆಯಲ್ಲಿ ಕೂಡಲಸಂಗಮದ ಮಾರಾಟ ಮಳಿಗೆ ಬಾಡಿಗೆದಾರರು ಆರ್ಥಿಕ ಸಂಕಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಲಾಕ್ಡೌನ್ ಅವಧಿಯ ಬಾಡಿಗೆ ಮೊತ್ತ ಮನ್ನಾ ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಸಭೆಯಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಮುರುಗೇಶ್ ನಿರಾಣಿ, ಪ್ರಾಧಿಕಾರದ ವ್ಯಾಪ್ತಿಯ ಶಾಸಕರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
(ಇದನ್ನೂ ಓದಿ: ಕೊಡಗು: ಮಳೆಯಿಂದ ಹಾನಿಗೀಡಾದ ಚೆಂಬು ಗ್ರಾಮಕ್ಕೆ ಸಚಿವ ಅಶೋಕ್ ಭೇಟಿ.. ಪರಿಹಾರ ಘೋಷಣೆ)
ಕನಕದಾಸರ ಅರಮನೆಯಲ್ಲಿ ಧ್ವನಿ-ಬೆಳಕು ಪ್ರದರ್ಶನ ವ್ಯವಸ್ಥೆ: ಸಂತ ಕನಕದಾಸರ ಜನ್ಮಸ್ಥಳ ಬಾಡದಲ್ಲಿ ನಿರ್ಮಿಸಲಾಗಿರುವ ಕನಕದಾಸರ ಅರಮನೆಯಲ್ಲಿ ಧ್ವನಿ-ಬೆಳಕು ಪ್ರದರ್ಶನ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಎಂ, ಕನಕದಾಸರ ಅರಮನೆಯು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇದನ್ನು ಇನ್ನಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ ಧ್ವನಿ-ಬೆಳಕು ಪ್ರದರ್ಶನ ಪ್ರಾರಂಭಿಸಲು ಸೂಚಿಸಿದರು. ಇದಕ್ಕೆ ಅತ್ಯುತ್ತಮ ಸಂಸ್ಥೆಗಳ ಮೂಲಕ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.
ಅಂತೆಯೇ ಅರಮನೆಯಲ್ಲಿ ಕನಕದಾಸರ ಜೀವನ ಕುರಿತು ಅನಿಮೇಷನ್ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಉನ್ನತೀಕರಿಸಿ, 3ಡಿ ಚಿತ್ರ ನಿರ್ಮಾಣ ಮಾಡಲು ಸಿಎಂ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದರು.