ಬೆಂಗಳೂರು: ಹೊರ ರಾಜ್ಯದಿಂದ ಬಂದು ರಾಜ್ಯದಲ್ಲಿ ನೆಲೆಸಿದ್ದರೂ ಸ್ಥಳೀಯರೊಂದಿಗೆ ಬೆರೆತಿರುವ ಜೈನ ಸಮಾಜ ನಮ್ಮ ಸಮಾಜದಿಂದ ಕೆಲವು ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಅವರ ವಿಶ್ವಾಸ ಉಳಿಸಿಕೊಳ್ಳುವ ರೀತಿ ನಾವು ಆಡಳಿತ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿನ್ನೆ ಮಾಧವ ನಗರದ ಕಲ್ಪತರು ಅಪಾರ್ಟ್ಮೆಂಟ್ ಬಳಿ ಇರುವ ಕಲ್ಪತರು ಮುನಿಸುವರ್ತ್ ಸ್ವಾಮಿ ದೇವಸ್ಥಾನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಅರವಿಂದ್ ಸಾಗರ್ ಸುರೀಜಿ ಆಶೀರ್ವಾದ ತೆಗೆದುಕೊಂಡರು. ನಂತರ ಮುನಿಸುವರ್ತ್ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿಎಂ ಅವರಿಗೆ ದುರ್ಗಾದೇವಿ ಕಂಚಿನ ಪ್ರತಿಮೆ ನೀಡಲಾಯಿತು. ಈ ವೇಳೆ, ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಬರಬೇಕು ಎಂದು ಜೈನ ನಾಯಕರು ಒತ್ತಾಯ ಮಾಡಿದರು. ಆಗ ವಿಷಯ ಬದಲಾಯಿಸಿ ಬೇರೆ ಮಾತನಾಡಿ ಎಂದು ಸಿಎಂ ನಗುತ್ತಲೇ ಹೇಳಿದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನಾಡಿನ ಸಮಸ್ಯೆ, ಜನರ ಸಂಕಷ್ಟ ದೂರವಾಗಲಿ. ನಾಡು ಅಭಿವೃದ್ಧಿಯಾಗಿ ಸಮೃದ್ಧವಾಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ಜೈನ ಸಮಾಜ ಬಹಳ ಪರೋಪಕಾರಿ ಸಮಾಜ. ದೂರದ ರಾಜಸ್ಥಾನ, ಗುಜರಾತ್ನಿಂದ ಬಂದರೂ ಸಹ ಯಾವ ಊರಿಗೆ ಬರುತ್ತಾರೋ ಅದೇ ಊರಿನವರೇ ಆಗಿ ಬಿಡುತ್ತಾರೆ. ಅಲ್ಲಿನ ಜನರ ಜೊತೆ ಬೆರೆತು ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತಾರೆ. ಜೈನ ಸಮಾಜ ಸಂಸ್ಕೃತಿ ಇರುವಂತಹ ಸಮಾಜ. ಅವರ ಮೂಲತತ್ವ ಅಹಿಂಸೆಯಾಗಿದೆ. ಅವರು ಬಹಳ ಮಾನವೀಯತೆಯಿಂದ ನಡೆದುಕೊಳ್ಳಲು ಅದು ಕೂಡ ಕಾರಣ ಎಂದರು.
ವಿಶ್ವಾಸ ಉಳಿಸಿಕೊಳ್ಳುತ್ತೇವೆ: ಭಗವಾನ್ ಮಹಾವೀರರು ತ್ಯಾಗದ ಪ್ರತೀಕವಾಗಿದ್ದಾರೆ. ಬಹಳ ದೊಡ್ಡ ಸಾಮ್ರಾಜ್ಯದ ಅರಸರಾಗಿದ್ದ ಮಹಾವೀರರು, ಸಮಾಜದಲ್ಲಿರುವ ಎಲ್ಲ ಕ್ಷೋಭೆ ನೋಡಿ ಸರ್ವಸ್ವವನ್ನು ಬಿಟ್ಟು ಲೋಕಕಲ್ಯಾಣಕ್ಕಾಗಿ ಸಮರ್ಪಣೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದರು. ಎಲ್ಲವನ್ನು ತ್ಯಾಗ ಮಾಡಿ ಹೋದರು. ಉಟ್ಟ ಬಟ್ಟೆಯನ್ನೂ ಬಿಟ್ಟು ತಪಸ್ಸಿಗೆ ಕೂರುತ್ತಾರೆ. ಈ ರೀತಿಯ ನಡವಳಿಕೆ ಸಂಸ್ಕೃತಿ ಬಹಳ ಅಪರೂಪ. ಹೀಗಾಗಿ ಅವರೆಲ್ಲ ಮಹಾತ್ಮರಾಗಿದ್ದಾರೆ.
ಬುದ್ಧ - ಮಹಾವೀರ ಸೇರಿದಂತೆ ದೊಡ್ಡ ದೊಡ್ಡವರ ಕಥೆ ಇದೇ ಆಗಿದೆ. ಇರುವುದೆಲ್ಲವನ್ನೂ ತ್ಯಾಗಮಾಡಿ ಹೋಗುವುದು ಬಹಳ ದೊಡ್ಡದು. ಅದಕ್ಕೆ ವಿಶಾಲವಾದ ಹೃದಯ ಇರಬೇಕು. ಪ್ರತಿ ತೀರ್ಥಂಕರರ ಜೀವನ ಇದೇ ರೀತಿಯ ತ್ಯಾಗದ್ದಾಗಿದೆ ಎಂದರು. ಇನ್ನೂ, ಈ ರಾಜ್ಯದ ಬಗ್ಗೆ ತಾವೆಲ್ಲ ಚಿಂತೆ ಮಾಡಿದ್ದೀರಿ. ತಾವೇನೋ ಒಂದು ನಿರೀಕ್ಷೆ, ವಿಶ್ವಾಸ ಇಟ್ಟಿದ್ದೀರಿ. ಆ ನಿಟ್ಟಿನಲ್ಲಿ ವಿಶ್ವಾಸವನ್ನು ಉಳಿಸಿಕೊಳ್ಳುವ ರೀತಿ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕಿಕ್ ಬಾಕ್ಸರ್ ಕಿಶೋರ್‌ಗೆ ಶುಭ ಹಾರೈಕೆ: ನೆದರ್ಲ್ಯಾಂಡ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಕಿಕ್ ಬಾಕ್ಸರ್ ಕಿಶೋರ್ ಚಿನ್ನದ ಪದಕ ಗಳಿಸಿ ದೇಶಕ್ಕೆ ಕೀರ್ತಿ ತರುತ್ತಾನೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೊಸಕೋಟೆ ತಾಲೂಕಿನ ಕಿಶೋರ್ ಕಿಕ್ ಬಾಕ್ಸಿಂಗ್ನಲ್ಲಿ ಏಷ್ಯಾಗೇಮ್ಸ್ನಲ್ಲಿ ಗೋಲ್ಡ್ ಮೆಡಲ್ ಗೆದ್ದಿದ್ದಾನೆ. ಈಗ ನೆದರ್ಲ್ಯಾಂಡ್ ನಲ್ಲಿ ನಡೆಯಲಿರುವ ವಿಶ್ವಚಾಂಪಿಯನ್ಸ್ ನಲ್ಲಿ ಭಾಗವಹಿಸುತ್ತಿದ್ದಾನೆ. ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ತರುವ ಮೂಲಕ ದೇಶಕ್ಕೆ ಹೆಸರು ತಂದು ಅಭಿಮಾನವನ್ನು ಉಳಿಸುತ್ತಾನೆ ಎನ್ನುವ ವಿಶ್ವಾಸವಿದೆ ಎಂದು ಕಿಶೋರ್‌ಗೆ ಸಿಎಂ ಶುಭ ಕೋರಿದರು.
ಇದನ್ನೂ ಓದಿ: ರಾಮನಗರ ಚಿತ್ರಮಂದಿರದಲ್ಲಿ 'ಜೇಮ್ಸ್' ಚಿತ್ರ ವೀಕ್ಷಿಸಿದ ಅಪ್ಪು ಅಭಿಮಾನಿಗಳು
ನೋ ಕಾಮೆಂಟ್ಸ್: ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದರು. ಪತ್ರಕರ್ತರಿಂದ ಪ್ರಶ್ನೆ ಬರುತ್ತಿದ್ದಂತೆ ಮೌನವಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು.