ಬೆಂಗಳೂರು: ಇಂದು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಕೇಸರಿ ಶಾಲು ಧರಿಸಿ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಸವರಾಜ್ ಬೊಮ್ಮಾಯಿ ವಿಧಾನಸೌಧವನ್ನು ವಿಶಿಷ್ಟ ರೀತಿಯಲ್ಲಿ ಪ್ರವೇಶಿಸಿದ್ದಾರೆ. ಮೆಟ್ಟಿಲುಗಳಿಗೆ ನಮಸ್ಕರಿಸುವ ಮೂಲಕ ನೂತನ ಸಿಎಂ ಬಸವರಾಜ ಬೊಮ್ಮಾಯಿ ಶಕ್ತಿ ಕೇಂದ್ರವನ್ನು ಪ್ರವೇಶಿಸಿದರು.
ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಜಭವನದಿಂದ ನೇರವಾಗಿ ಕೆಂಗಲ್ ಗೇಟ್ ಮೂಲಕ ವಿಧಾನಸೌಧ ಪ್ರವೇಶಿಸಿದ ಸಿಎಂ ಬೊಮ್ಮಾಯಿ, ಮೆಟ್ಟಿಲುಗಳಿಗೆ ನಮಸ್ಕರಿಸಿ ಒಳಗೆ ತೆರಳಿದರು. ಬಳಿಕ ಸಿಎಂ ಕೊಠಡಿಗೆ ತೆರಳಿ ಸರಳ ಪೂಜೆ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವರಾದ ವಿ. ಸೋಮಣ್ಣ, ಡಾ. ಕೆ.ಸುಧಾಕರ್ ಉಪಸ್ಥಿತರಿದ್ದರು.
ಪೂಜೆ ಬಳಿಕ ಕ್ಯಾಬಿನೆಟ್ ಹಾಲ್ ಪ್ರವೇಶಿಸಿ, ಅಧಿಕೃತವಾಗಿ ಹಾಗೂ ಸಾಂಕೇತಿಕವಾಗಿ ಸಂಪುಟ ಸಭೆ ನಡೆಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೂ ಮೊದಲ ಸಭೆ ನಡೆಸಿದರು.
ಇದನ್ನೂ ಓದಿ: ನಾನು ಡಿಸಿಎಂ ಆಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ: ಆರ್.ಅಶೋಕ್