ಬೆಂಗಳೂರು: ಭಾರಿ ಮಳೆಯಿಂದ ನಲುಗಿರುವ ನಗರದ ಹಲವು ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಎಂಗೆ ಸಚಿವ ಬೈರತಿ ಬಸವರಾಜ ಸಾಥ್ ನೀಡಿದರು.
ಗುಂಡಿಮಯವಾಗಿರುವ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುವಾಗ ಸಿಎಂ ಬೊಮ್ಮಾಯಿ ಹೈರಾಣಾದರು. ಹೆಣ್ಣೂರು ಬಂಡೆಯಿಂದ ವಡ್ಡರಪಾಳ್ಯಕ್ಕೆ ಹಾದುಹೋಗುವ ರಾಜಕಾಲುವೆ, ಶಿರಡಿ ಸಾಯಿಬಾಬಾ ಲೇಔಟ್ನ ದುಸ್ಥಿತಿಯನ್ನು ಸಿಎಂ ಪರಿಶೀಲನೆ ಮಾಡಿದರು.
ಕೊತ್ತನೂರು ಪ್ರದೇಶದಲ್ಲಿ ಸಿಎಂ ಪರಿಶೀಲನೆ ನಡೆಸುತ್ತಿದ್ದಾಗ ಅಲ್ಲಿನ ನಿವಾಸಿಗಳು ಸಿಎಂ ಬೊಮ್ಮಾಯಿ ಬಳಿ ಬಂದು ತಮಗಾದ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಿದರು. ರಾಜಕಾಲುವೆಯಿಂದ ಮನೆಗಳಿಗೆ ನೀರು ನುಗ್ಗಿದೆ ಎಂದು ಅಳಲು ತೋಡಿಕೊಂಡರು. ಕಸಕಡ್ಡಿ ಚರಂಡಿಯಲ್ಲಿ ತುಂಬಿಕೊಂಡು ಬ್ಲಾಕ್ ಆಗಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಮನೆಗಳಿಗೆ ನೀರು ನುಗ್ಗುತ್ತಿದೆ. ಶಾಶ್ವತ ಪರಿಹಾರ ಒದಗಿಸಿ ಎಂದು ಸಿಎಂಗೆ ಮನವಿ ಮಾಡಿದರು.
ಹೆಣ್ಣೂರಿನ ಗೆದ್ದಲಹಳ್ಳಿಯಲ್ಲಿ ಮಳೆಯಿಂದ ನೀರು ತುಂಬಿರುವ ಮನೆಗಳಿಗೆ ಸಿಎಂ ಭೇಟಿ ಪರಿಶೀಲನೆ ಮಾಡಿದರು. ಚರಂಡಿ ನೀರು ರಾಜಕಾಲುವೆ ಸೇರಲು ಸಂಪರ್ಕ ಇಲ್ಲ. ಹೀಗಾಗಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ ಎಂದು ಜನರು ದೂರಿದಾಗ, ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ ನೀಡಿದರು.
ಮಳೆ ಹಾನಿ ವೀಕ್ಷಣೆ ಬಳಿಕ ಮಾತನಾಡಿದ ಸಿಎಂ, ರಾಜಕಾಲುವೆ ಸಮಸ್ಯೆಯಿಂದ ಮಳೆ ನೀರು ಮನೆಗಳಿಗೆ ನುಗ್ಗಿದೆ. ಇದಕ್ಕೆ ಶಾಶ್ವತ ಪರಿಹಾರ ಕೈಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ರಾಜಕಾಲುವೆ ಒತ್ತುವರಿ ಮಾಡಿದ್ದನ್ನು ಏಕಾಏಕಿ ತೆರವು ಮಾಡುವುದಕ್ಕೆ ಆಗುವುದಿಲ್ಲ. ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಮಾಡಬೇಕು. ಹಂತ ಹಂತವಾಗಿ ಒತ್ತುವರಿ ತೆರವು ಕಾರ್ಯ ಮಾಡಲಾಗುವುದು. ತೆರವು ಕಾರ್ಯಾಚರಣೆ ಶಾಶ್ವತ ಪರಿಹಾರ ಆಗಲೇಬೇಕು. ನಾವು ಈ ಬಗ್ಗೆ ಶೀಘ್ರವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.