ಬೆಂಗಳೂರು : ಬಹು ನಿರೀಕ್ಷಿತ ವಿದ್ಯುತ್ ಚಾಲಿತ ಬಿಎಂಟಿಸಿ ಬಸ್‌ಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ವಿಧಾನಸೌಧದ ಮುಂಭಾಗ ಚಾಲನೆ ನೀಡಿದ್ದಾರೆ. ಇಂದು ಒಟ್ಟು 90 ವಿದ್ಯುತ್ ಚಾಲಿತ ಬಸ್‌ಗಳಿಗೆ ಚಾಲನೆ ನೀಡಲಾಯಿತು.
150 ಬಿಎಸ್ VI ಡೀಸೆಲ್ ಬಸ್‌ಗಳಿಗೂ ಹಸಿರು ನಿಶಾನೆ ತೋರಿದರು. ವಿದ್ಯುತ್ ಚಾಲಿತ ಬಿಎಂಟಿಸಿ ಬಸ್‌ಗಳನ್ನು ಮೊದಲ ಹಂತದಲ್ಲಿ ಮೆಟ್ರೋ ಫೀಡರ್ ಸಾರಿಗೆಗೆ ಬಳಸಲಾಗುತ್ತದೆ. ತಲಾ 30 ಬಸ್‌ಗಳಂತೆ ಕೆಂಗೇರಿ, ಯಶವಂತಪುರ ಹಾಗೂ ಕೆ.ಆರ್. ಪುರಂ ಘಟಕಗಳಲ್ಲಿ ಸಂಚರಿಸಲಿವೆ.
90 ಎಲೆಕ್ಟ್ರಿಕ್ ಬಸ್‌ಗಳನ್ನ ಈಗ ಉದ್ಘಾಟನೆ ಮಾಡಲಾಗಿದೆ. 300 ಬಸ್‌ಗಳು ಮುಂದಿನ ಆರು ತಿಂಗಳಲ್ಲಿ ಬರಲಿವೆ. ಇದೇ ವೇಳೆ ಸಿಎಂ ಬೊಮ್ಮಾಯಿ ಎಲೆಕ್ಟ್ರಿಕ್ ಬಸ್‌ನಲ್ಲಿ ಕೂತು ಸಂಚಾರ ನಡೆಸಿ ಪರಿಶೀಲಿಸಿದರು.
ಬಿಎಂಟಿಸಿ ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ : ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಬಿಎಂಟಿಸಿ ಪುನಶ್ಚೇತನ ಸಂಬಂಧ ಅಧಿಕಾರಿಗಳಿಗೆ ಖಡಕ್ ಸಲಹೆ-ಸೂಚನೆಗಳನ್ನು ನೀಡಿದರು. ಸಾರಿಗೆ ಇಲಾಖೆ ಸರ್ಕಾರದ ಜೀವನಾಡಿ ಇದ್ದ ಹಾಗೆ, ಸರ್ಕಾರ ಚಲನ ಸಂಕೇತ ಸಾರಿಗೆ ಇಲಾಖೆ, ಜನ ಸಾಮಾನ್ಯರು ಓಡಾಡುವ ಸಂಪರ್ಕ ಸಾಧನವಾಗಿದೆ. ಹೊಸ ಹೊಸ ತಂತ್ರಜ್ಞಾನ ಬಳಸಿ ಸಾರಿಗೆ ಸಂಸ್ಥೆ ಮುನ್ನೆಡೆಯುತ್ತಿದೆ ಎಂದರು.
ಸಾರಿಗೆ ಸಂಸ್ಥೆ ಮುಂದಿರಬೇಕು ಎಂದು ನಮ್ಮ ಚಿಂತನೆ, ಸಬ್ಸಿಡಿ ಆಧಾರದಲ್ಲಿ ಸಂಸ್ಥೆ ನಡೆಸುವುದು ಕಷ್ಟ ಸಾಧ್ಯ. ಸಾರಿಗೆ ಸಂಸ್ಥೆ ಪುನಶ್ಚೇತನಗೊಳಿಸಲು ಎಂ.ಆರ್.ಶ್ರೀನಿವಾಸಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಅವರು ಬಿಎಂಟಿಸಿ ಪುನಶ್ಚೇತನಕ್ಕಾಗಿ ಶಿಫಾರಸುಗಳನ್ನು ನೀಡಲಿದ್ದಾರೆ ಎಂದು ಹೇಳಿದರು.
ಬಿಎಂಟಿಸಿ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬನೆ ಆಗಬೇಕು. ಆಗ ಜನರಿಗೆ ಉತ್ತಮ ಸೇವೆ ನೀಡಬಹದು. ಹೆಸ್ಕಾಂ ಮತ್ತು ಸಾರಿಗೆ ಇಲಾಖೆಯಲ್ಲಿ ಆರ್ಥಿಕ ಸ್ವಾವಲಂಬನೆ ಬರಬೇಕು. ಹೆಸ್ಕಾಂನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜಯರಾಜ್ ನೇತೃತ್ವದಲ್ಲಿ ಸಮಿತಿ ಮತ್ತು ಸಾರಿಗೆ ಇಲಾಖೆಗೆ ಶ್ರೀನಿವಾಸ ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೇವೆ. ಅವರು ವರದಿ ನೀಡ್ತಾರೆ. ಬಿಎಂಟಿಸಿಯವರು ಜನರಿಗೆ ಉತ್ತಮ ಸೇವೆ ನೀಡುವ ಜೊತೆಗೆ, ಲಾಭದಾಯಕವೂ ಆಗಬೇಕು. ಅದಕ್ಕೆ ಸೋರಿಕೆ ತಡೆಯಬೇಕು, ಕೇವಲ ಸಬ್ಸಿಡಿ ಕೇಳೋದಲ್ಲ, ಸೋರಿಕೆ ತಡೆಯಬೇಕು ಎಂದು ಸೂಚನೆ ನೀಡಿದರು.
'ಆದಾಯ ಸೊರಿಕೆಯಾದರೆ ಏನು ಪ್ರಯೋಜನ ಇಲ್ಲ' : ನಾವು ಸಬ್ಸಿಡಿ ಕೊಡುತ್ತೇವೆ. ಇನ್ನೊಂದು ಕಡೆ ಆದಾಯ ಸೋರಿಕೆ ಆಗುತ್ತಿದ್ದರೆ, ಏನು ಪ್ರಯೋಜನ ಇಲ್ಲ. ಅದಕ್ಕೆ ಕಡಿವಾಣ ಹಾಕಬೇಕು. ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಬೇಕು. ಹೆಚ್‌ಎಎಲ್ ಮತ್ತಿತರ ಸಂಸ್ಥೆಗಳ ಜೊತೆ ಈ ಬಗ್ಗೆ ಮಾತನಾಡುತ್ತೇವೆ. ಖಾಸಗಿಯವರು ಲಾಭದಾಯಕ ಉದ್ಯಮ ಮಾಡಿಕೊಂಡಿದ್ದಾರೆ. ಆದರೆ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಏಕೆ ಲಾಭದಾಯಕ ಆಗುವುದಿಲ್ಲ ಎಂದು ಪ್ರಶ್ನಿಸಿದರು.
ಬಿಎಂಟಿಸಿ ಬಸ್‌ಗೆ ಹೊಸ ವಿನ್ಯಾಸ ಕೊಡಿ, ಜನರು ಬಸ್‌ನಲ್ಲಿ ಓಡಾಡುವ ಬಯಕೆ ಮೂಡಬೇಕು. ಆ ರೀತಿ ಹೊಸ ವಿನ್ಯಾಸ ಮಾಡಬೇಕು. ಸರ್ಕಾರ ಎಲ್ಲ ಸಹಕಾರ ನೀಡಲಿದೆ, ದೇಶದಲ್ಲಿ ನಂಬರ್ ಒನ್ ಸಂಸ್ಥೆಯನ್ನಾಗಿ ರೂಪಿಸಬೇಕು. ಸಬ್ಸಿಡಿ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಸಬ್ಸಿಡಿ ಆಧಾರದಲ್ಲಿ ಸಾರಿಗೆ ಸಂಸ್ಥೆ ನಡೆಸೋದು ಕಷ್ಟ ಈಗ. ಸಾರಿಗೆ ಇಲಾಖೆ ಪುನಶ್ಚೇತನ ಮಾಡುವುದು ಅಗತ್ಯ.
ಸರ್ಕಾರದಿಂದ ಹಣ ಕೇಳೋದು ಬಹಳ ಸುಲಭ, ಸಬ್ಸಿಡಿ ಕೇಳೋದು ಬಹಳ ಸುಲಭ. ಹಲವು ವಿಚಾರಗಳಲ್ಲಿ ಸೋರಿಕೆ ಇದೆ ಅದನ್ನು ತಡೆಯುವ ಕೆಲಸ ಮಾಡಬೇಕು. ಸರ್ಕಾರ ಸಬ್ಸಿಡಿ ಕೊಡ್ತಾ ಹೋಗೋದ್ರಲ್ಲಿ ಅರ್ಥ ಇಲ್ಲ. ನೀವೇ ನಿಮ್ಮ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದು ಸಲಹೆ ನೀಡಿದರು.
ಹೊಸ ಚಿಂತನೆಯನ್ನು ಮಾಡಿ, ಅದೇ ವರದಿ, ಅದೇ ಹಳೇಯದನ್ನು ಮಾಡ್ಕೊಂಡು ಇರೋದು ಏನದು? ಒಂದು ರೋಡ್ ಮ್ಯಾಪ್ ಮಾಡಿ, ದಕ್ಷತೆಯಿಂದ ಕೆಲಸ ಮಾಡಿ. ಬೇರೆ ದೇಶಗಳಲ್ಲಿ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆ ಹೆಚ್ಚಿದೆ. ಅದೇ ಮಾದರಿ ನಮ್ಮಲ್ಲೂ ಅನುಸರಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ನಾವೇನು ರಾಜಕಾರಣ ಮಾಡುತ್ತೇವೆಂದು ನಿಮಗೆ ಹೇಳುವ ಅಗತ್ಯವಿಲ್ಲ: ಮಾಧ್ಯಮಗಳ ಮೇಲೆ ಸಿಎಂ ಗರಂ