ಬೆಂಗಳೂರು: ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡಬೇಕೋ ಅಥವಾ ಸರ್ಕಾರವೇ ಪುನಶ್ಚೇತನ ಮಾಡಿ ನಡೆಸಬೇಕೋ ಎಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ.
ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ ಜಿಲ್ಲೆಯ ರೈತರ ಅವಿಭಾಜ್ಯ ಅಂಗವಾಗಿದೆ. ಜತೆಗೆ ಮೈಸೂರು ರಾಜರು ಕಾರ್ಖಾನೆಯನ್ನು ಪ್ರಾರಂಭಿಸಿದ್ದರು. ಮೈಶುಗರ್ 'ಏಷ್ಯಾದ ಮೊದಲ ಸಕ್ಕರೆ ಕಾರ್ಖಾನೆ'ಯಾಗಿದೆ.
420 ಕೋಟಿ ರೂ. ನಷ್ಟದಲ್ಲಿರುವ ಕಾರ್ಖಾನೆ
2008 ರಿಂದ ಮೂರು ಸರ್ಕಾರಗಳಿಂದ ಒಟ್ಟು ಮೈಶುಗರ್ ಕಂಪನಿಗೆ 700 ಕೋಟಿಯಷ್ಟು ಹಣವನ್ನು ಪುನಶ್ಚೇತನಕ್ಕಾಗಿ ಕೊಡಲಾಗಿತ್ತು. ಆದರೂ ಕಾರ್ಖಾನೆ ಸುಮಾರು 420 ಕೋಟಿ ರೂ. ನಷ್ಟದಲ್ಲೇ ಇದೆ. ಕಳೆದ ಮೂರು ವರ್ಷಗಳಿಂದ ನಷ್ಟದ ಹಿನ್ನೆಲೆ ಕಾರ್ಖಾನೆ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಕಾರ್ಖಾನೆ ಪುನಶ್ಚೇತನಕ್ಕೆ ಆಗ್ರಹ:
ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಬಗ್ಗೆ ಹಲವು ವರ್ಷಗಳಿಂದ ಬಲವಾದ ಕೂಗು ಕೇಳಿ ಬರುತ್ತಿದೆ. ಕೆಲವರು ಗುತ್ತಿಗೆ ನೀಡುವ ಮೂಲಕ ಕಾರ್ಖಾನೆಯನ್ನು ಪುನಾರಂಭಿಸಿ ಎಂದು ಒತ್ತಾಯಿಸಿದ್ದರೆ, ಕೆಲ ರೈತರು ಹಾಗು ಪ್ರತಿಪಕ್ಷಗಳು ಸರ್ಕಾರವೇ ಸುಪರ್ದಿಗೆ ತೆಗೆದು ಪುನಶ್ಚೇತನ ಮಾಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಕೆಲ ವರ್ಗದ ರೈತರು ಜಂಟಿ ಸಹಭಾಗಿತ್ವದಲ್ಲಿ ಕಾರ್ಖಾನೆಯನ್ನು ಪುನರಾರಂಭಿಸುವಂತೆ ಬೇಡಿಕೆ ಇಟ್ಟಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ ಸಭೆಯಲ್ಲಿ ಮೈಶುಗರ್ ಕಾರ್ಖಾನೆಯನ್ನು ಗುತ್ತಿಗೆ ನೀಡುವ ಸಂಬಂಧ ನಿರ್ಧಾರ ಕೈಗೊಳ್ಳಲಾಗಿತ್ತು. ಬಳಿಕ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಸಮಸ್ಯೆ ಬಗೆಹರಿಯದೇ ಉಳಿಯಿತು. ಇದೀಗ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜನಪ್ರತಿನಿಧಿಗಳು, ರೈತರ ಜತೆಗೆ ಸಭೆ ನಡೆಸುತ್ತಿದ್ದಾರೆ.
ಸಭೆಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ನಾರಾಯಣಗೌಡ, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಎಸ್.ಟಿ.ಸೋಮಶೇಖರ್, ಸಂಸದೆ ಸುಮಲತಾ, ಮಂಡ್ಯ ಭಾಗದ ಶಾಸಕರಾದ ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ಸೇರಿದಂತೆ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗು ಆ ಭಾಗದ ರೈತ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಇದನ್ನೂ ಓದಿ: ಅ.18ರಂದು ಮೈಶುಗರ್ ಸಕ್ಕರೆ ಕಾರ್ಖಾನೆ ಬಗ್ಗೆ ಅಂತಿಮ ನಿರ್ಣಯ: ಸಿಎಂ