ಕೆ.ಆರ್.ಪುರ: ನಗರದ ಹೊರಮಾವು ವಾರ್ಡ್‌ನ ನಗರೇಶ್ವರ ನಾಗೇನಹಳ್ಳಿಯ ಸ್ಲಂಬೋರ್ಡ್‌ನ ಕ್ವಾಟ್ರಸ್‌ನಲ್ಲಿ ಅನಧಿಕೃತವಾಗಿ ನೆಲೆಸಿರುವುದರ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆ ಸ್ಲಂಬೋರ್ಡ್ ಆಯುಕ್ತ ಶಿವಪ್ರಸಾದ್ ಅವರೊಂದಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅನಧಿಕೃತವಾಗಿ ನೆಲೆಸಿರುವವರನ್ನು ಮುಲಾಜಿಲ್ಲದೆ ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರದಿಂದ ಘೋಷಿಸಿರುವ ಫಲಾನುಭವಿಗಳನ್ನು ಹೊರತುಪಡಿಸಿ, ಪೊಲೀಸರ ಸಹಾಯದಿಂದ ಎಲ್ಲರನ್ನು ಹೊರಗೆ ಕಳುಹಿಸಬೇಕು. ಅನಧಿಕೃತವಾಗಿ ಸೇರಿಕೊಳ್ಳುವವರೆಗೆ ಏನು ಮಾಡುತ್ತಿದ್ರಿ? ಆಗಾಗ ಸ್ಲಂ ಬೋರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುವುದಕ್ಕೆ ಆಗುವುದಿಲ್ಲವೇ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಾಧ್ಯಮದವರ ಜೊತೆ ಮಾತನಾಡಿ, ವಸತಿ ಇಲ್ಲದವರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಸ್ಲಂ ಬೋರ್ಡ್‌ಗಳನ್ನು ನಿರ್ಮಿಸಿದ್ದು ಇಲ್ಲೂ ಕೆಲವರು ದುಡ್ಡಿನ ಆಸೆಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಭೈರತಿ ಬಸವರಾಜ ಎಚ್ಚರಿಸಿದರು.