ಬೆಂಗಳೂರು: ಕೋವಿಡ್-19 ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗಿದೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಪೋಷಕರು ತಮ್ಮ ಮಕ್ಕಳನ್ನು ಈಗ ಖಾಸಗಿ ಶಾಲೆಗಳ ಬದಲಿಗೆ ಸರ್ಕಾರಿ ಶಾಲೆಗಳಿಗೆ ತಂದು ಸೇರಿಸುತ್ತಿರುವುದು ಒಂದು ಮಹತ್ವದ ಬದಲಾವಣೆಯಾಗಿದೆ.
ಕೊರೊನಾ ಲಾಕ್‌ಡೌನ್‌ನಿಂದ ವಿದ್ಯಾರ್ಥಿಗಳ ಪೋಷಕರು ಬಸವಳಿದು ಹೋಗಿದ್ದು, ಸರ್ಕಾರಿ ಶಾಲೆಗಳತ್ತ ಪಾಲಕರ ಚಿತ್ತ ನೆಟ್ಟಿದ್ದಾರೆ. ಕೆಲವರ ಕೆಲಸಕ್ಕೆ ಕತ್ತರಿ ಬಿದ್ದಿದೆ. ಆರ್ಥಿಕ ಸಂಕಷ್ಟ ಎದುರಾಗಿ ನಗರಗಳನ್ನು ಬಿಟ್ಟು ಗ್ರಾಮಗಳತ್ತ ಬರುತ್ತಿದ್ದಾರೆ. ಮಕ್ಕಳ ಶಾಲಾ ಫೀಸ್ ಕಟ್ಟಲಾಗದ ಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ, ಕೊರೊನಾ ಕಲಿಸಿದ ಪಾಠದಿಂದ ಈ ಮೊದಲು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದವರು ಈಗ ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಮೊದಲಿಗಿಂತಲೂ ತುಸು ಜಾಸ್ತಿಯಾಗಿದೆ. ಜಿಲ್ಲೆಯಲ್ಲಿ ಅನುದಾನಿತ 32 ಪ್ರಾಥಮಿಕ ಶಾಲೆ ಸೇರಿ ಒಟ್ಟು 990, ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ ಅನುದಾನಿತ 32 ಪ್ರೌಢಶಾಲೆಗಳು ಸೇರಿ 198 ಸರ್ಕಾರಿ ಪ್ರೌಢಶಾಲೆಗಳಿವೆ. ಒಟ್ಟು 1,68,286 ವಿದ್ಯಾರ್ಥಿಗಳಿದ್ದಾರೆ. ಖಾಸಗಿ ಶಾಲೆಯಿಂದ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ 571 ಮಕ್ಕಳು ಹೊಸದಾಗಿ ಪ್ರವೇಶಾತಿ ಪಡೆದಿದ್ದಾರೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಕ್ಕಳ ಪ್ರವೇಶಾತಿ ಸಂಖ್ಯೆ ಹೆಚ್ಚು ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 1,436 ಸರ್ಕಾರಿ ಪ್ರಾಥಮಿಕ ಮತ್ತು 104 ಪ್ರೌಢ ಶಾಲೆಗಳಿವೆ. ಅನುದಾನ ರಹಿತ ಶಾಲೆಗಳ ಸಂಖ್ಯೆ 104 ಇವೆ. ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ 1,430ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪಡೆದಿದ್ದಾರೆ. ಬೆಳಗಾವಿಯಲ್ಲೂ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳ ಸಂಖ್ಯೆ ಅಧಿಕವಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯಲ್ಲಿ ಕಳೆದ ಒಂದು ವರ್ಷದಲ್ಲಿ ಕೈಗೊಂಡ ಕ್ರಮಗಳಿಂದಾಗಿ ಮಕ್ಕಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದು, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿರುವುದು ಖುಷಿ ತಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಹೇಳಿದ್ದರು.
ಖಾಸಗಿ ಶಾಲೆಗಳು ತೆರೆಯದಿದ್ದರೂ ಸರ್ಕಾರಿ ಶಾಲೆಗಳ ಶಿಕ್ಷಕರು ವಟಾರಗಳಲ್ಲೇ ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿದ್ದಾರೆ. ಪಾಲಕರು ಪ್ರತ್ಯಕ್ಷವಾಗಿಯೇ ನೋಡಿದ್ದರಿಂದ ಹಾಗೂ ಸರ್ಕಾರಿ ಶಾಲೆಗಳಲ್ಲಿ ಅನೇಕ ಸೌಲಭ್ಯಗಳು ದೊರೆಯುತ್ತಿರುವುದರಿಂದ ಸಹಜವಾಗಿಯೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುತ್ತಿದ್ದಾರೆ ಎನ್ನಲಾಗ್ತಿದೆ.