ಬೆಂಗಳೂರು: ನೆರೆಹಾನಿ ಹಾಗೂ ಕೋವಿಡ್ ನಿರ್ವಹಣೆ ವೇಳೆ ರಕ್ಷಣಾ ಪಡೆಗಳ ಸೇವೆ ಶ್ಲಾಘನೀಯವಾಗಿದ್ದು, ನಮ್ಮ ಪೊಲೀಸ್ ಇಲಾಖೆ ಮಾದರಿ ಪಡೆಯಾಗಿ ಹೊರಹೊಮ್ಮಬೇಕು. ಇದಕ್ಕಾಗಿ ಸರ್ಕಾರದ ಬೆಂಬಲ ಸದಾ ಇರಲಿದೆ. ಇಲಾಖೆಯ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಅಗ್ನಿಶಾಮಕ ಮತ್ತು ತುರ್ತುಸೇವೆ, ಗೃಹ ರಕ್ಷಕ ದಳ, ಪೌರ ರಕ್ಷಣೆ ಹಾಗೂ ವಿಪತ್ತು ಸ್ಪಂದನಾ ಪಡೆಯ 236 ಸಿಬ್ಬಂದಿಗೆ 'ಮುಖ್ಯಮಂತ್ರಿಗಳ ಪದಕ' ಪ್ರಧಾನ ಮಾಡಲಾಯಿತು. ನಂತರ ಮಾತನಾಡಿದ ಸಿಎಂ, ಶ್ಲಾಘನೀಯ ಸೇವೆ ಸಲ್ಲಿಸಿ ಚಿನ್ನದ ಪದಕ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತುರ್ತು ಸಂದರ್ಭದಲ್ಲಿ ನಿರ್ಭೀತಿಯಿಂದ ಶ್ರಮಿಸಿ ಜನರನ್ನು ಸಂಕಷ್ಟದಿಂದ ಪಾರು ಮಾಡುವ ಕೆಲಸ ಶ್ಲಾಘನೀಯ. ಕೋವಿಡ್ ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಹೇಳಿದ್ರು.
ದೇಶದ ಆಂತರಿಕ ಸುಭದ್ರತೆಗೆ ಪೊಲೀಸ್ ವ್ಯವಸ್ಥೆ ಅತ್ಯಂತ ಅವಶ್ಯಕ. ರಾಜ್ಯದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ, ವಿಪತ್ತು ವೇಳೆ ಜನರ ಆಸ್ತಿಪಾಸ್ತಿ ರಕ್ಷಣೆಗೆ ಸದಾ ಸನ್ನದ್ದವಾಗಿರುವ ಅಗ್ನಿಶಾಮಕ ತುರ್ತು ಪಡೆ ನಮ್ಮದಾಗಿದೆ. ಅನೇಕ ವರ್ಷದಿಂದ ಈ ಕೆಲಸ ಮಾಡುತ್ತಾ ಬಂದಿದ್ದು, ರಾಷ್ಟ್ರಮಟ್ಟದಲ್ಲಿ ನಮ್ಮ ಪಡೆ ಅಗ್ರ ಸ್ಥಾನದಲ್ಲಿದೆ. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಯೋಜನೆ ರೂಪಿಸಲಾಗಿದೆ. ಬೆಂಕಿ, ಕಟ್ಟಡ ಕುಸಿತ ಎದುರಿಸಲು ಆಧುನಿಕ ಉಪಕರಣ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಲ ಕಾಲಕ್ಕೆ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಜನರ ಹಿತರಕ್ಷಣೆ ನಮ್ಮ ಮೊದಲ ಆದ್ಯತೆ ಎಂದರು.
ಬೆಂಗಳೂರಿನಲ್ಲಿ 7,500 ಕ್ಯಾಮೆರಾ ಅಳವಡಿಸಿ, ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಖಾತ್ರಿಪಡಿಸುವ ಕೆಲಸ ಮಾಡಲಾಗಿದೆ. ರಾಜ್ಯಾದ್ಯಂತ ರಾತ್ರಿ ಗಸ್ತು ಹೆಚ್ಚಿಸಿ ಮಹಿಳಾ ಸುರಕ್ಷತೆಗೆ ಕ್ರಮವಹಿಸಲಾಗಿದೆ. ನಮ್ಮ ಪೊಲೀಸ್ ಇಲಾಖೆ ಮಾದರಿ ಪಡೆಯಾಗಿ ಹೊರಹೊಮ್ಮಲಿ. ಸರ್ಕಾರದ ಬೆಂಬಲ ನಿಮಗೆ ಸದಾ ಇರಲಿದೆ. ಇಲಾಖೆ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅಭಯ ನೀಡಿದ್ರು.
ಕ್ರೈಂ ಲೀಡ್ಸ್ ದಿ ಲಾ ಆಗಿತ್ತು, ಈಗ ಲಾ ಬೀಟ್ಸ್ ದಿ ಕ್ರೈಂ;
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕ್ರೈಂ ಲೀಡ್ಸ್ ದಿ ಲಾ ಆಗಿತ್ತು, ಈಗ ಲಾ ಬೀಟ್ಸ್ ದಿ ಕ್ರೈಂ ಆಗಿದೆ. ಇದು ಇನ್ನಷ್ಟು ದಕ್ಷವಾಗಬೇಕು ಎನ್ನುವುದು ಉದ್ದೇಶವಾಗಿದೆ. ಆರ್ಥಿಕ ಅಪರಾಧ, ಸೈಬರ್ ಕ್ರೈಂ, ಡಾರ್ಕ್ ವೆಬ್ ಅಪರಾಧ ಚಟುವಟಿಕೆ, ಡ್ರಗ್ ವಹಿವಾಟು ನಿಯಂತ್ರಣಕ್ಕೆ ನಮ್ಮ ಪೊಲೀಸ್ ಸದೃಢವಾಗಬೇಕು. ತಂತ್ರಜ್ಞಾನ ಬಳಕೆಯನ್ನು ಹೆಚ್ಚೆಚ್ಚು ಮಾಡಿಕೊಳ್ಳಬೇಕಿದೆ ಎಂದರು.
ಆನ್ಲೈನ್ ಪ್ಲಾಟ್ ಫಾರಂ ಅಡಿ ಹೊಸ ತಂತ್ರಜ್ಞಾನ ಬಳಕೆ ಮಾಡಲು ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಅನುಮೋದನೆ ಕೊಟ್ಟಿದ್ದಾರೆ. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬದಲಾದಂತೆ ನಮ್ಮ ಇಲಾಖೆ ಹೆಜ್ಜೆಯರಿಸಿಕೊಳ್ಳಬೇಕು. ಎಫ್ಎಸ್ಎಲ್ ಲ್ಯಾಬ್ ಅಗತ್ಯತೆ ಮನಗಂಡು ಹೊಸದಾಗಿ ಆರು ಲ್ಯಾಬ್ಗೆ ಸಿಎಂ ಅನುಮತಿ ಕೊಟ್ಟಿದ್ದಾರೆ. ಇದು ದೊಡ್ಡ ಕ್ರಾಂತಿ ಆಗಲಿದೆ ಎಂದರು.
ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುಯವಲ್ಲಿ ಹಿಂದೆ ಬೀಳಲ್ಲ. ಅಪರಾಧ ಪ್ರಕರಣಗಳ ಶೀಘ್ರ ಶೋಧನೆ ಮಾಡಲು ಪೊಲೀಸ್ ಇನ್ನಷ್ಟು ತ್ವರಿತವಾಗಿ ಕೆಲಸ ಮಾಡಲಿದೆ ಎಂದು ಗೃಹ ಸಚಿವರು ಭರವಸೆ ನೀಡಿದರು.
ಪದಕ ಸ್ವೀಕಾರ ನಿಮ್ಮ ವೀರ, ಸಾಹಸ ಕರ್ತವ್ಯದ ದ್ಯೋತಕವಾಗಿದೆ. ಇದು ಎಲ್ಲರೂ ಹೆಮ್ಮ ಪಡುವ ವಿಷಯವಾಗಿದೆ. ನಾಲ್ಕೈದು ವರ್ಷದಿಂದ ಪದಕ ಪ್ರಧಾನ ಆಗಿರಲಿಲ್ಲ. ಆಧುನಿಕ ಯಂತ್ರೋಪಕರಣ ಕೊಡಲು ಮುಖ್ಯಮಂತ್ರಿಗಳು 20 ಕೋಟಿ ಬಿಡುಗಡೆ ಮಾಡಿದ್ದಾರೆ. ರಾಜ್ಯ ವಿಪತ್ತು ಪಡೆ ಇನ್ನಷ್ಟು ಬಲಗೊಂಡಿದೆ. ಅಗ್ನಿಶಾಮಕ ಕೇಂದ್ರ ಸ್ಥಾಪಕ, ಉಪಕರಣಕ್ಕೆ 300 ಕೋಟಿಗೂ ಅಧಿಕ ಬಜೆಟ್ ಪಡೆದುಕೊಂಡಿದ್ದು, ಆದಷ್ಟು ಬೇಗ ಎಲ್ಲ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.