ಬೆಂಗಳೂರು: ಮನೆ ಮಾಲೀಕನೋರ್ವ ಜೆಟ್ ಏರ್ವೇಸ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ ದೋಖಾ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಮನೆ ಮಾಲೀಕ ಚಾಂದ್ ತನ್ನ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಆಕೆ ಕೆಲಸ ಹುಡುಕುತ್ತಿರುವ ವಿಷಯ ತಿಳಿದು ತನ್ನ ಸ್ನೇಹಿತ ಅರ್ಮಾನ್ ಇದ್ದಾನೆ, ಆತನಿಗೆ ಹೇಳಿ ನಿನಗೆ ಜೆಟ್ ಏರ್ವೇಸ್‌ನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಯುವತಿಗೆ ಭರವಸೆ ನೀಡಿದ್ದ. ಜೊತೆಗೆ ಹೋಟೆಲ್ವೊಂದರಲ್ಲಿ ಅರ್ಮಾನ್‌ನನ್ನು ಭೇಟಿ ಮಾಡಿಸಿ, ಅರ್ಮಾನ್ ಕೂಡ ಜೆಟ್ ಏರ್ವೇಸ್‌ನಲ್ಲಿ ಕೆಲಸ ಮಾಡುವುದಾಗಿ ಪರಿಚಯಿಸಿದ್ದ.
ಇದನ್ನು ನಂಬಿದ ಯುವತಿ ತನ್ನ ಎಲ್ಲಾ ದಾಖಲೆಗಳನ್ನು ಅರ್ಮಾನ್ಗೆ ನೀಡಿದ್ದಳು. ಇದಾದ ಬಳಿಕ ದುಬೈನಲ್ಲಿ ನಡೆಯುವ ತರಬೇತಿಗೆ ನಿನ್ನನ್ನು ಕಳುಹಿಸುವೆ, ಆದ್ರೆ, ಫಾರ್ಮ್ ತುಂಬಿ ಮುಂಗಡವಾಗಿ 7 ಲಕ್ಷ ರೂ. ಹಣ ನೀಡಬೇಕು ಎಂದಿದ್ದ. ಅದಕ್ಕೂ ಮೊದಲು ಟೆಲಿಫೋನ್ ಸಂದರ್ಶನ ಇರುತ್ತದೆ, ಜವಾಜ್ ಎಂಬುವವರು ಕರೆ ಮಾಡುತ್ತಾರೆ. ಟೆಲಿಫೋನ್ ಮೂಲಕವೇ ನೀನು ಉತ್ತರ ನೀಡಬೇಕು ಎಂದು ಸೂಚಿಸಿದ್ದ. ಅರ್ಮಾನ್ ಹೇಳಿದಂತೆ ಜವಾಜ್ ಎಂಬ ವ್ಯಕ್ತಿ ಕರೆ ಮಾಡಿ, ಅಕೆಯನ್ನ ಸಂದರ್ಶಿಸಿದ್ದ. ಇದಾದ ಬಳಿಕ ದುಬೈಗೆ ಬರಲು 7 ಲಕ್ಷ ರೂ ಹಣ ಪಾವತಿಸಬೇಕು ಎಂದಿದ್ದನ್ನು ನಂಬಿದ ಯುವತಿ ಎಸ್ಬಿಐ ಖಾತೆಗೆ 7 ಲಕ್ಷ ರೂ ವರ್ಗಾವಣೆ ಮಾಡಿದ್ದಾಳೆ.
ತದನಂತರ ಯುವತಿಗೆ ಎಮಿರೆಟ್ಸ್ ಏರ್ಲೈನ್ಸ್ ನಿಂದ ಆಫರ್ ಲೆಟರ್ ಕೂಡ ಬಂದಿದೆ. ಕೆಲಸಕ್ಕೆ ಸೇರುವ ದಿನ ತಿಳಿದ ಯುವತಿ ನೇರವಾಗಿ ಏರ್ಲೈನ್ಸ್ ಗೆ ಕರೆ ಮಾಡಿದ್ದಾರೆ. ಈ ವೇಳೆ ಆಫರ್ ಲೆಟರ್ ನಕಲಿ, ನಾವು ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ. ಮನೆಯ ಮಾಲೀಕ ಚಾಂದ್ಗೆ ಕರೆ ಮಾಡಿದರೆ ಆತನ ಫೋನ್ ಕೂಡ ಸ್ವಿಚ್ ಆಫ್ ಆಗಿದೆ.
ಈ ಕುರಿತು ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.