ಬೆಂಗಳೂರು: ನಗರದ ಐಟಿ ಸೆಕ್ಟರ್‌ಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ (ಕೇಂದ್ರ ಅಪರಾಧ ಪತ್ತೆ ದಳ) ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಮೂಲದ ಕಿಂಗ್ ಪಿನ್ ಒಬ್ಬನು ನಗರದಲ್ಲಿ ಜಾರ್ಖಂಡ್ ಮೂಲದ ಇಬ್ಬರು ವ್ಯಕ್ತಿಗಳಿಗೆ ತಿಂಗಳ ಸಂಬಳ ನೀಡುವ ಜೊತೆಗೆ ಮನೆಯ ವ್ಯವಸ್ಥೆ ಮಾಡಿಕೊಟ್ಟು ಡ್ರಗ್ಸ್ ಮಾರಾಟ ದಂಧೆ ನಡೆಸಲು ನೇಮಿಸಿದ್ದನು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ವಿದೇಶದ ಡಾರ್ಕ್ ವೆಬ್ ಆದ ವಿಕರ್ - ಮಿ - ವೆಬ್ನಲ್ಲಿ ಬಿಟ್ ಕಾಯಿನ್ನಿಂದ ಹಣ ಪಾವತಿ ಮಾಡಿ ಕಡಿಮೆ ಬೆಲೆಗೆ ವಿವಿಧ ಬಗೆಯ ಮಾದಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದ ದೆಹಲಿಯ ಕಿಂಗ್ ಪಿನ್, ಅವುಗಳನ್ನು ತಮ್ಮ ನೆಟ್ ವರ್ಕ್ ಮೂಲಕ ಐಟಿ ಸೆಕ್ಟರ್‌ಗಳಲ್ಲಿ ಮಾರಾಟ ಮಾಡಲು ಮುಂದಾಗಿದ್ದನು.
ಈ ಬಗ್ಗೆ ಮಾಹಿತಿ ಬಂದ ತಕ್ಷಣವೇ ಕಾರ್ಯೋನ್ಮುಖರಾದ ಸಿಸಿಬಿ ಪೊಲೀಸರು ಡ್ರಗ್ ಪೂರೈಕೆ ಮಾಡುತ್ತಿದ್ದ ಜಾರ್ಖಂಡ್ ಮೂಲದ ವಿಕಾಸ್ ಸಿಂಗ್ ಮತ್ತು ಶಿವಂ ಸಿಂಗ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ..ವ್ಯಕ್ತಿಗೆ ಚಾಕು ಇರಿತ
ಆರೋಪಿಗಳಿಂದ 2 ಕೋಟಿ ಮೌಲ್ಯದ 150 ಎಂ.ಡಿ.ಎಂ.ಎ ಟ್ಯಾಬ್ಲೆಟ್ಸ್, 400 ಗ್ರಾಂ ಚರಸ್ ಉಂಡೆಗಳು,180 ಎಲ್.ಎಸ್.ಡಿ ಸ್ಟ್ರಿಪ್ಸ್, 3,520 ಗ್ರಾಂ ಹ್ಯಾಶಿಶ್ ಆಯಿಲ್, 50 ಗ್ರಾಂ ಹೈಡ್ರೊ ಗಾಂಜಾ ಹಾಗೂ 30 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿಯಾದ ದೆಹಲಿಯ ಕಿಂಗ್ ಪಿನ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಸಿಸಿಬಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.