ಬೆಂಗಳೂರು: ಜಾತಿ ಜನಗಣತಿ ವರದಿ ಜಾರಿ ಮಾಡ್ತೀನಿ ಅಂತ ಸಚಿವ ಈಶ್ವರಪ್ಪ ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಡುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಚಿವ ಕೆ.ಎಸ್ ಈಶ್ವರಪ್ಪ ಮಾತುಗಳ ಮೇಲೆ ನಂಬಿಕೆ ಇಡಬೇಕು. ವರದಿಯ ಸ್ವೀಕಾರ ಮತ್ತು ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕ್ತೀವಿ. ಈಶ್ವರಪ್ಪ ಕ್ಯಾಬಿನೆಟ್ನಲ್ಲಿ ಇದಕ್ಕೆ ಒಪ್ಪಿಗೆ ಪಡೆದು ವರದಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ನಾವು ಅವರ ಮಾತಿನ ಮೇಲೆ ವಿಶ್ವಾಸ ಇಡುತ್ತೇವೆ. ನೋಡೋಣ ಏನಾಗುತ್ತೆ ಅಂತ. ಒಂದು ಮಾತ್ರ ಸತ್ಯ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭ ವರದಿ ಸಿದ್ಧವಾಗಿರಲಿಲ್ಲ. ತಯಾರಾಗಿದ್ದರೆ ನಾನು ಬಂದೆ ಕ್ಯಾಬಿನೆಟ್ ಒಪ್ಪಿಗೆ ಪಡೆದು ಅದನ್ನು ಜಾರಿಗೆ ತಂದಿರುತ್ತಿದ್ದೆ. ಸರ್ಕಾರ ವರದಿ ಜಾರಿಗೆ ತರುವುದಕ್ಕೆ ನಾವು ಯಾವುದೇ ಗಡುವು ನೀಡುವುದಿಲ್ಲ. ಒಂದೆರಡು ತಿಂಗಳಲ್ಲಿ ಜಾರಿಗೆ ತರಲು ಕೂಡ ಸಾಧ್ಯವಿಲ್ಲ. ಹೌದು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು ತರುತ್ತೇವೆ ಎಂದು ವಿವರಿಸಿದರು.
ಅಧ್ಯಕ್ಷರ ನೇಮಕ ಮಾಡಲಿ:
ಹಿಂದುಳಿದ ವರ್ಗಗಳ ಆಯೋಗಕ್ಕೆ ಅಧ್ಯಕ್ಷರ ನೇಮಕ ಮಾಡಿಲ್ಲ ಸರ್ಕಾರ. ಆಯೋಗಕ್ಕೆ ಶೀಘ್ರದಲ್ಲೇ ಅಧ್ಯಕ್ಷರ ನೇಮಕ ಮಾಡಿ ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ. ತಾನ ತೆರವಾಗಿ ಸಾಕಷ್ಟು ಕಾಲ ಆಗಿದೆ. ಇನ್ನಷ್ಟು ವಿಳಂಬ ಮಾಡುವುದು ಬೇಡ. ಸರ್ಕಾರ ಯಾಕೆ ಇಷ್ಟೊಂದು ವಿಳಂಬ ಮಾಡುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ಈಶ್ವರಪ್ಪ ಕೂಡ ನಾವು ಹೋರಾಟ ಮಾಡುವ ಅಗತ್ಯವೇ ಬರದಂತೆ ಆದಷ್ಟು ಶೀಘ್ರ ವರದಿ ಜಾರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಸಚಿವ ಶ್ರೀರಾಮುಲು ಕೂಡ ಇದೆ ಉತ್ತರ ನೀಡಿದ್ದಾರೆ. ಇಂದು ಕೂಡ ಈಶ್ವರಪ್ಪ ಹಾಡಿರುವ ಮಾತಿನಲ್ಲಿ ಕಾಂಗ್ರೆಸ್ ನಾಯಕರಿಗೆ ಹೋರಾಟ ಮಾಡುವ ಅಗತ್ಯ ಬರುವುದಿಲ್ಲ ಎಂದು ಹೇಳಿದ್ದಾರೆ ಅಂತ ಸಮಜಾಯಿಷಿ ನೀಡಿದರು.
ಕುರುಬರಿಗೆ ಮಾತ್ರ ಮೀಸಲಾತಿ ಅಲ್ಲ:
ಎಸ್ಸಿ ಗುಣಲಕ್ಷಣ ಇರುವ ಎಲ್ಲಾ ವರ್ಗಗಳಿಗೂ ಮೀಸಲಾತಿ ಸಿಗಬೇಕು. ಒಂದು ನಿರ್ದಿಷ್ಟ ವರ್ಗಕ್ಕೆ ಮೀಸಲಾತಿ ಸಿಗೋದಿಲ್ಲ. ಕೇವಲ ಕುರುಬರಿಗೆ ಮಾತ್ರ ಮೀಸಲಾತಿ ಸಿಗಬೇಕು ಎಂದು ನಾವು ಹೇಳಲಿಲ್ಲ. ಗಂಗಾಮತಸ್ಥರು, ಗೊಲ್ಲರು ಎಲ್ಲರಿಗೂ ಮೀಸಲಾತಿ ಸಿಗಬೇಕು. ಇದರಿಂದ ಸರ್ಕಾರ ಎಲ್ಲರ ಕುಲಶಾಸ್ತ್ರ ಅಧ್ಯಯನ ನಡೆಸಲಿ. ಇದರಲ್ಲಿ ಎಸ್ಟಿ ಗುಣಲಕ್ಷಣ ಇರುವ ಎಲ್ಲಾ ಸಮುದಾಯದವರನ್ನು ಮೀಸಲಾತಿ ವ್ಯಾಪ್ತಿಗೆ ಸೇರಿಸಲಿ. ಕೆಲ ಸಮುದಾಯಗಳಲ್ಲಿ ಜನಸಂಖ್ಯೆ ಹೆಚ್ಚಾದಲ್ಲಿ ಮೀಸಲಾತಿ ಪ್ರಮಾಣವನ್ನು ಕೂಡ ಹೆಚ್ಚಿಸಲಿ. ವಾಲ್ಮೀಕಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ.3ರಷ್ಟು ಇರುವ ಮೀಸಲಾತಿಯನ್ನು ಶೇ.7 ರಷ್ಟಕ್ಕೆ ವಿಸ್ತರಿಸುವುದಕ್ಕೆ ನನ್ನ ವಿರೋಧ ಇಲ್ಲ. ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವುದಕ್ಕೆ ನಮ್ಮ ಅಭ್ಯಂತರ ಇಲ್ಲ. ಗೊಂಡ ಸಮುದಾಯ ಈಗಾಗಲೇ ಎಸ್ಟಿ ವ್ಯಾಪ್ತಿಯಲ್ಲಿ ಇದೆ.
ರಾಜ್ಯದಲ್ಲಿ ಇವರು ಬೀದರ್ ಮತ್ತು ಕಲಬುರಗಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಕೊಡಗಿನಲ್ಲಿರುವ ಎಲ್ಲಾ ಕುರುಬರು ಎಸ್ಟಿ ವ್ಯಾಪ್ತಿಗೆ ಸೇರಿದವರು. ಗೊಂಡ, ರಾಜಗೊಂಡ ಸಮುದಾಯದವರು ಕಲಬುರಗಿ ಬೀದರ್ ಹಾಗೂ ಯಾದಗಿರಿಯಲ್ಲಿ ವಾಸವಾಗಿದ್ದಾರೆ. ಇವರೆಲ್ಲರೂ ಎಸ್ಟಿ ವ್ಯಾಪ್ತಿಗೆ ಬರುತ್ತಾರೆ. ಕುರುಬರು ಮತ್ತು ಈ ಸಮುದಾಯದವರು ಒಂದೇ ವ್ಯಾಪ್ತಿಗೆ ಬರುತ್ತಾರೆ. ಇದನ್ನು ದಾಖಲೆ ಸಮೇತ ನಾವು ಶಿಫಾರಸು ಮಾಡಿದ್ದೇವೆ. ಗೊಲ್ಲರು ಹಾಗೂ ಕಾಡು ಗೊಲ್ಲರನ್ನು ಸಹ ಎಸ್ಟಿ ವ್ಯಾಪ್ತಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದೇವೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂದು ಕೂಡ ನಮ್ಮ ಪ್ರಬಲವಾದ ವಾದವಾಗಿದೆ ಎಂದರು.