ಬೆಂಗಳೂರು : ರಾಜ್ಯದ ಲಕ್ಷಾಂತರ ಮಂದಿ ಬಿ ಖಾತಾ ನಿವೇಶನದಾರರಿಗೆ ಬಂಪರ್ ಕೊಡುಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಇನ್ನೆರಡು ತಿಂಗಳಲ್ಲಿ ಎ ಖಾತಾ ಒದಗಿಸಲು ನಿರ್ಧರಿಸಿದೆ. ಎ ಖಾತಾ ಪಡೆಯುವ ನಿವೇಶನದಾರರು ಇನ್ನು ಮುಂದೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಸೇರಿದಂತೆ ಹಲವು ಸೌಲಭ್ಯಗಳನ್ನುಪಡೆಯಲು ಸಾಧ್ಯವಾಗಲಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ ಖಾತಾದಾರರಿಗೆ ಎ ಖಾತಾ ನೀಡುವ ಸಂಬಂಧ ಹಲವು ಕಾಲದಿಂದ ಬೇಡಿಕೆ ಕೇಳಿ ಬರುತ್ತಲೇ ಇತ್ತು. ಈ ಸಂಬಂಧ ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಇಲಾಖೆಯ ಉನ್ನತಾಧಿಕಾರಿಗಳ ಜತೆ ಸಭೆ ನಡೆಸಿ, ಬಿ ಖಾತೆದಾರರಿಗೆ ಇನ್ನೆರಡು ತಿಂಗಳಲ್ಲಿ ಎ ಖಾತಾ ಮಂಜೂರು ಮಾಡುವಂತೆ ಸೂಚಿಸಿದ್ದಾರೆ.
ಬಿ ಖಾತಾ ನಿವೇಶನದಾರರು ತಮ್ಮ ನಿವೇಶನ ಅಥವಾ ಅಲ್ಲಿ ಕಟ್ಟಿರುವ ಮನೆ, ಕಟ್ಟಡವನ್ನು ಅಡಮಾನವಾಗಿಟ್ಟು ಬ್ಯಾಂಕುಗಳಿಂದ ಸಾಲ ಪಡೆಯಲು ಇದುವರೆಗೆ ಸಾಧ್ಯವಿರಲಿಲ್ಲ. ಅದೇ ರೀತಿ, ಇನ್ನೂ ಹಲವು ಸೌಲಭ್ಯಗಳು ಅವರಿಗೆ ದೊರೆಯುತ್ತಿರಲಿಲ್ಲ. ಆದರೆ ಈಗ ಬಿ ಖಾತಾದಾರರಿಗೆ ಎ ಖಾತಾ ನೀಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದರು.
ಒತ್ತುವರಿ ತೆರವು: ಈ ಮಧ್ಯೆ ಅಭಿವೃದ್ಧಿ ಪ್ರಾಧಿಕಾರಿಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಲೇ ಔಟುಗಳಲ್ಲಿ ನಾಗರಿಕ ಬಳಕೆಗೆ ಎಂದು ಮೀಸಲಿಟ್ಟ ಸಿ.ಎ ನಿವೇಶನಗಳು ಸಮರ್ಪಕ ನಿರ್ವಹಣೆಯಿಲ್ಲದೇ ಒತ್ತುವರಿಯಾಗುತ್ತಿರುವ ಕುರಿತು ಸರ್ಕಾರಕ್ಕೆ ದೂರುಗಳು ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿರುವ ಸಿ.ಎ ನಿವೇಶನಗಳ ವಿವರ ಒದಗಿಸುವಂತೆ ಸೂಚಿಸಲಾಗಿದೆ. ಈ ವಿವರ ದೊರೆತ ನಂತರ ಒತ್ತುವರಿದಾರರಿದ್ದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಲಾಗುವುದು. ನಂತರ ಅವುಗಳ ಬಳಕೆಯ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗುವುದು ಎಂದು ತಿಳಿಸಿದರು.
ಕುಡಿವ ನೀರಿನ ಯೋಜನೆ : ಇನ್ನು ರಾಜ್ಯಾದ್ಯಂತ ಕುಡಿವ ನೀರು ಒದಗಿಸಲು 9,335 ಕೋಟಿ ರೂ. ವೆಚ್ಚದ ಯೋಜನೆಯನ್ನು ತಯಾರಿಸಿದ್ದು ಇದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇಕಡಾ ಐವತ್ತರಷ್ಟು ಹಣ ನೀಡುತ್ತಿದ್ದು, ರಾಜ್ಯ ಸರ್ಕಾರ ಶೇಕಡಾ ಐವತ್ತರಷ್ಟು ಹಣ ಒದಗಿಸುತ್ತಿದೆ.
ಈ ಯೋಜನೆಯಡಿ ರಾಜ್ಯದ ಎಲ್ಲರಿಗೂ ಕುಡಿಯುವ ನೀರು ಒದಗಿಸಲು ಯೋಚಿಸಲಾಗಿತ್ತಾದರೂ ಅದಕ್ಕೆ ಇಪ್ಪತ್ತು ಸಾವಿರ ಕೋಟಿ ರೂ. ಅಗತ್ಯವಿತ್ತು. ಹೀಗಾಗಿ ಯೋಜನೆಯನ್ನು ಮಿತಿಗೊಳಿಸಲಾಗಿದ್ದು ಶೇಕಡಾ ಐವತ್ತರಷ್ಟು ಭಾಗವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬನೆ : ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು ಎಂಬ ಉದ್ದೇಶದಿಂದ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸುವ, ಮತ್ತಿತರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಆ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮಗೆ ಅಗತ್ಯವಾದ ಸಂಪನ್ಮೂಲವನ್ನು ತಾವೇ ಸೃಷ್ಟಿಸಿಕೊಳ್ಳಬೇಕು ಎಂಬುದು ಸರ್ಕಾರದ ಉದ್ದೇಶ.
ಹಲವು ಕಾಲದಿಂದ ಬಗೆಹರಿಯದೇ ಉಳಿದಿದ್ದ ರಾಜ್ಯದ ಪೌರಕಾರ್ಮಿಕರ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಅಸ್ತು ಎಂದಿದ್ದು ಇದರಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ಪ್ರತಿ ವರ್ಷ 539 ಕೋಟಿ ರೂ. ಹೊರೆ ಬೀಳಲಿದೆ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯ ಚುನಾವಣೆಯಿಂದ ಚುನಾವಣೆಗೆ ಕ್ಷೇತ್ರ ಬದಲಿಸುವುದು ಸರಿಯಲ್ಲ: ಸಚಿವ ಸುಧಾಕರ್