ಬೆಂಗಳೂರು: ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಆದ್ಯತೆ ನೀಡಬೇಕು, ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಒತ್ತು ನೀಡಬೇಕು. ಬ್ಲ್ಯಾಕ್ ಫಂಗಸ್ ಔಷಧ ಎಲ್ಲಿ ಸಿಕ್ಕರೂ ಖರೀದಿ ಮಾಡಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು.
ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದರು. ನಗರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬರುತ್ತಿದ್ದು, ಇದೇ ರೀತಿ ಕಠಿಣ ನಿಯಮಗಳನ್ನು ತಪ್ಪದೇ ಜಾರಿಗೆ ತರಬೇಕೆಂದು ಸೂಚಿಸಿದರು.
ಹಳ್ಳಿಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಸೂಚಿಸಿದ ಸಿಎಂ, ಕೋವಿಡ್ ಡಿಸ್ಚಾರ್ಜ್ ಪ್ರೋಟೋಕಾಲ್ ಸರಿಯಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಬ್ಲ್ಯಾಕ್ ಫಂಗಸ್ ಔಷಧ ಎಲ್ಲಿ ಸಿಕ್ಕರೂ ಖರೀದಿ ಮಾಡಿ ಎಂದು ತಿಳಿಸಿದ್ದಾರೆ.
ಜೂನ್ ಅಂತ್ಯದವರೆಗೂ ಕೋವಿಡ್-19 ಮಾರ್ಗಸೂಚಿಗಳನ್ನು ಮುಂದುವರೆಸಬೇಕು ಎಂದು ಕೇಂದ್ರ ಗೃಹ ಸಚಿವಾಲಯದಿಂದ ಬಂದಿರುವ ಆದೇಶ ಪಾಲನೆ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ಸದ್ಯ ಲಾಕ್ ಡೌನ್ ಜೂನ್ 7 ರವರೆಗೂ ಇದ್ದು, ಸಾಕಷ್ಟು ಸಮಯವಿದೆ, ಮುಂದೆ ಈ ಬಗ್ಗೆ ಚರ್ಚೆ ನಡೆಸೋಣ ಎನ್ನುವ ನಿರ್ಧಾರಕ್ಕೆ ಬರಲಾಯಿತು.
ಸಭೆಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್, ಸಚಿವ ಅರವಿಂದ ಲಿಂಬಾವಳಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.