ಬೆಂಗಳೂರು: ಮುಂಬೈನಲ್ಲಿರುವ ಅತೃಪ್ತ ಶಾಸಕರ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗದಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿರಾಳರಾಗಿದ್ದಾರೆ. ಮುಂಜಾನೆ ವಾಕಿಂಗ್ ಮಾಡಿದ ಬಳಿಕ ಬಿಎಸ್ವೈ ನಾಳಿನ ಕಾರ್ಯತಂತ್ರ ರೂಪಿಸುವಲ್ಲಿ ಮಗ್ನರಾಗಿದ್ದಾರೆ. ಸಂಜೆ ರೆಸಾರ್ಟ್ನಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಎಂಟಿಬಿ ನಾಗರಾಜ್ ಮನವೊಲಿಕೆ ಪ್ರಹಸನ ನಡೆದರೂ ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯದೇ ಇರುವ ನಿಲುವಿಗೆ ಬದ್ಧವಾಗಿರುವುದು ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿದೆ. ಒಂದೆಡೆ ಬಿಜೆಪಿ ಶಾಸಕರು ರೆಸಾರ್ಟ್ನಲ್ಲಿ ಜಾಲಿ ಮೂಡ್ನಲ್ಲಿದ್ದಾರೆ.
ಎಂದಿನಂತ ಬೆಳಗ್ಗೆ ನಿವಾಸದ ಸಮೀಪದಲ್ಲಿ ವಾಕಿಂಗ್ ಮುಗಿಸಿದ ಯಡಿಯೂರಪ್ಪ ತುಸು ಸಂತಸವಾಗಿಯೇ ಇದ್ದದ್ದು ಎಲ್ಲವೂ ಸರಿಯಾಗಿದೆ ಎನ್ನುವುದನ್ನು ತೋರಿಸುವಂತಿತ್ತು. ಪುತ್ರ ಮತ್ತು ಸಂಸದ ಬಿ.ವೈ.ರಾಘವೇಂದ್ರ ಜೊತೆ ಉಪಹಾರ ಸೇವಿಸಿದರು.
ಒಂದು ವಾರದಿಂದ ನಿರಂತರವಾಗಿ ನಿವಾಸದಲ್ಲಿ ಪ್ರಮುಖ ನಾಯಕರ ಸಭೆ ನಡೆಸುತ್ತಿದ್ದ ಯಡಿಯೂರಪ್ಪ, ಇಂದು ಯಾವುದೇ ಸಭೆ ನಡೆಸುವ ಗೋಜಿಗೆ ಹೋಗಲಿಲ್ಲ. ಶಾಸಕ ಮಾಧುಸ್ವಾಮಿ ಹೊರತುಪಡಿಸಿ ಇತರ ನಾಯಕರನ್ನು ಕರೆಸಿಕೊಳ್ಳಲಿಲ್ಲ. ಬಿಜೆಪಿ ಮಾಧುಸ್ವಾಮಿ ಅವರನ್ನು ಕರೆಸಿಕೊಂಡ ಬಿಎಸ್ವೈ ಮಾತುಕತೆ ನಡೆಸಿದರು. ಇಂದು ಮತ್ತೊಮ್ಮೆ ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿ ನಾಳಿನ ಅಧಿವೇಶನದಲ್ಲಿ ಯಾವ ರೀತಿ ನಿಲುವು ವ್ಯಕ್ತಪಡಿಸಬೇಕು ಎನ್ನುವ ಕುರಿತು ಮಾಧುಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಂತೆ ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಇಂದು ಸಂಜೆ 4 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆಯನ್ನು ನಿಗದಿ ಮಾಡಲಾಗಿದೆ. ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಾಡ ಹೋಟೆಲ್ನಲ್ಲೇ ಬಿಜೆಪಿ ಶಾಸಕಾಂಗ ಸಭೆ ನಡೆಸಲು ನಿರ್ಧರಿಸಲಾಗಿದೆ. ನಾಳೆ ವಿಧಾನಸಭಾ ಅಧಿವೇಶನದಲ್ಲಿ ಕೈಗೊಳ್ಳಬೇಕಾದ ಹೋರಾಟದ ಬಗ್ಗೆ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.