ದಾವಣಗೆರೆ : ಸಿದ್ದರಾಮಯ್ಯನವರು ವಿಪಕ್ಷದ ನಾಯಕರೆಂಬುದನ್ನು ಮರೆತು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಸೊಕ್ಕಿನ, ಧಿಮಾಕಿನ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ರು.
ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದಲ್ಲಿ ನಡೆದ ಪರಿಷತ್ ಚುನಾವಣೆಯ ಪ್ರಚಾರ ಸಭೆಗೆ ಹಾಜರಾಗುವ ಮುನ್ನ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಹಗುರವಾಗಿ ಮಾತನಾಡುತ್ತಿದ್ದಾರೆ. ಫಲಿತಾಂಶ ಬಂದ ಬಳಿಕ ಅವರಿಗೆ ತಿಳಿಯುತ್ತದೆ.
ಅವರ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ. ಮತದಾರರು ಇದೀಗ ಜಾಗೃತರಾಗಿದ್ದಾರೆ. ಜನರು ಯಾವುದು ಸರಿ, ಯಾವುದು ತಪ್ಪು ಎಂದು ತಿಳಿದುಕೊಳ್ಳುತ್ತಿದ್ದಾರೆ. ಮೈಸೂರಿನ ಚಾಮುಂಡೇಶ್ವರಿ ಮತ ಕ್ಷೇತ್ರದಲ್ಲಿ ಸೋತ ಸಿದ್ದರಾಮಯ್ಯ ಇಷ್ಟೊಂದು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುವಂತಹದ್ದಲ್ಲ. ಇಷ್ಟಾದರೂ ಬುದ್ಧಿ ಕಲಿಯದ ಸಿದ್ದರಾಮಯ್ಯ ಇನ್ನಾದರು ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕಾಗಿದೆ ಎಂದು ಕಿಡಿ ಕಾರಿದರು.
ಸಂಪುಟ ರಚನೆ ವಿಚಾರ : ಸಂಪುಟ ಪುನಃ ರಚನೆ ಮಾಡುವುದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರ. ಯಾರನ್ನು ಮಂತ್ರಿ ಮಾಡಬೇಕೆಂಬುದು ಸಿಎಂಗೆ ಬಿಟ್ಟ ವಿಚಾರ. ಅವರು ಏನು ಮಾಡುತ್ತಾರೆ ಎಂಬುದನ್ನು ನೋಡೋಣ. ಸಂಪುಟ ಪುನರ್ ರಚನೆಯಾಗಬಹುದೆಂಬ ನಿರೀಕ್ಷೆಯಿದೆ.
ಬೆಂಬಲ ನೀಡುವಂತೆ ಕುಮಾರಸ್ವಾಮಿ ಬಳಿ ಮಾತನಾಡಿದ್ದೇನೆ : ವಿಧಾನ ಪರಿಷತ್ ಚುನಾವಣೆಯಲ್ಲಿ ಎಲ್ಲಿ ನಿಮ್ಮ ಅಭ್ಯರ್ಥಿಗಳಿಲ್ಲ ಅಲ್ಲಲ್ಲಿ ಬೆಂಬಲಿಸುವಂತೆ, ಸಹಕರಿಸುವಂತೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದೇನೆ. ಅವರು ನೂರಕ್ಕೆ ನೂರು ನಮಗೆ ಸಹಕಾರ ಕೊಡುತ್ತಾರೆಂಬ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹೆಚ್ ಡಿ ದೇವೆಗೌಡ್ರು ಭೇಟಿ ಮಾಡಿರುವುದರಲ್ಲಿ ಯಾವುದೇ ರಾಜಕೀಯ ಇಲ್ಲ. ಚುನಾವಣೆಗೂ ಈ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಷತ್ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುವುದು ಖಚಿತ : ಪರಿಷತ್ ಚುನಾವಣೆಯಲ್ಲಿ ನಾವು 15 ಸ್ಥಾನ ಗೆಲ್ಲುತ್ತೇವೆ. ಬುದ್ಧಿವಂತ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ ಎಂಬ ನಂಬಿಕೆ ಇದೆ. ಕೇವಲ ಹಣದ ಬಲದಿಂದ ಚುನಾವಣೆ ಗೆಲ್ಲುತ್ತೇನೆ ಎಂದು ಹೋದ್ರೆ ಅವರು ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ಗೆ ಟಾಂಗ್ ನೀಡಿದರು.