ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಅನಾಯಾಸವಾಗಿ ಗೆಲ್ಲಲಿರುವ ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದೆ. ಹಾಗಾಗಿ ಯಾರಿಗೆ ಟಿಕೆಟ್ ಎನ್ನುವ ಗುಟ್ಟು ರಟ್ಟಾಗಿಲ್ಲ. ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಆಕಾಂಕ್ಷಿಗಳ ಸಾಲಿನಿಂದ ಹಿಂದೆ ಸರಿದಿದ್ದು ಅಚ್ಚರಿ ಆಯ್ಕೆ ಬಹುತೇಕ ಖಚಿತ ಎನ್ನುವ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ.
ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್ಗೆ ಕಗ್ಗಂಟಾಗಿದೆ. ಈಗಾಗಲೇ ಕೋರ್ ಕಮಿಟಿ ಹೆಸರುಗಳನ್ನು ಶಿಫಾರಸು ಮಾಡಿ ಕಳುಹಿಸಿದೆ. ಹಾಲಿ ಸದಸ್ಯೆಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ಹಾಲಿ ಸದಸ್ಯ ಕೆ.ಸಿ ರಾಮಮೂರ್ತಿ, ಉದ್ಯಮಿ ಪ್ರಕಾಶ್ ಶೆಟ್ಟಿ, ಬಿಎಸ್ವೈ ಆಪ್ತ ಲೆಹರ್ ಸಿಂಗ್ ಸೇರಿ ಹಲವು ಹೆಸರುಗಳನ್ನು ಕಳುಹಿಸಿಕೊಡಲಾಗಿದೆ.
ಹೈಕಮಾಂಡ್ ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆ ನಡೆಸಿದ್ದು, ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ. ಕಳೆದ ಬಾರಿ ವೆಂಕಯ್ಯ ಸಾಕಯ್ಯ ಅಭಿಯಾನಕ್ಕೆ ಬೆಸ್ತು ಬಿದ್ದಿದ್ದ ಬಿಜೆಪಿ ವೆಂಕಯ್ಯ ನಾಯ್ಡು ಬದಲು ನಿರ್ಮಲಾ ಸೀತಾರಾಮನ್ಗೆ ಅವಕಾಶ ನೀಡಿತ್ತು. ಈ ಬಾರಿ ನಿರ್ಮಲಾ ವಿರುದ್ಧ ಅಭಿಯಾನ ಶುರುವಾಗಿದೆ. ಹಾಗಾಗಿ ಅವರನ್ನು ಉತ್ತರ ಪ್ರದೇಶ ರಾಜ್ಯದಿಂದ ಆಯ್ಕೆ ಮಾಡಿ ರಾಜ್ಯದವರಿಗೆ ಅವಕಾಶ ನೀಡಬೇಕು ಎನ್ನುವ ಚಿಂತನೆಯನ್ನು ಹೈಕಮಾಂಡ್ ನಡೆಸಿದೆ ಎನ್ನಲಾಗಿದೆ. ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ತಮಗೆ ಟಿಕೆಟ್ ಬೇಡ, ಸಂಘಟನೆಯಲ್ಲಿ ಮುಂದುವರೆಯುತ್ತೇನೆ ಎಂದು ಹೈಕಮಾಂಡ್ಗೆ ಪತ್ರ ಬರೆದು ಆಕಾಂಕ್ಷಿಗಳ ಸಾಲಿನಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ಅಚ್ಚರಿ ಆಯ್ಕೆ ಖಚಿತ ಎನ್ನಲಾಗಿದೆ.
ಈ ಹಿಂದೆ ನಡೆದ ಚುನಾವಣೆಯಲ್ಲಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಹೆಸರನ್ನು ಕೊನೆ ಕ್ಷಣದಲ್ಲಿ ಆಯ್ಕೆ ಮಾಡಿ ರಾಜ್ಯದ ಜನರಿಗೆ ಅಪರಿಚಿತವಾಗಿದ್ದ ಕಾರ್ಯಕರ್ತರ ಹೆಸರು ಪ್ರಕಟಿಸಿ ಅಚ್ಚರಿ ಮೂಡಿಸಿತ್ತು. ಈ ಬಾರಿಯೂ ನಿರ್ಮಲಾ ಸೀತಾರಾಮನ್ ಅವರಿಗೆ ಉತ್ತರ ಪ್ರದೇಶದಿಂದ ಅವಕಾಶ ನೀಡುವ ನಿರ್ಧಾರ ಅಂತಿಮವಾದಲ್ಲಿ ರಾಜ್ಯದ ಎರಡು ಅಭ್ಯರ್ಥಿ ಹೆಸರು ಅಚ್ಚರಿ ಆಯ್ಕೆ ಸಾಧ್ಯತೆ ಇದೆ ಎನ್ನಲಾಗಿದೆ.
ಪರಿಷತ್ ಸ್ಥಾನದ ಚುನಾವಣೆಯಲ್ಲಿ ಬೆಂಬಲಿತರಿಗೆ ಟಿಕೆಟ್ ನೀಡದ ಹಿನ್ನೆಲೆ ಅಸಮಧಾನಗೊಂಡಿರುವ ಯಡಿಯೂರಪ್ಪ ಅವರನ್ನು ಸಮಾಧಾನಪಡಿಸುವ ನಿಟ್ಟಿನಲ್ಲಿ ಒಂದು ಸ್ಥಾನಕ್ಕೆ ಬಿಎಸ್ವೈ ಒಪ್ಪುವ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ ಎನ್ನಲಾಗಿದೆ. ಸಕ್ರಿಯ ಪ್ರಚಾರ ಕಾರ್ಯದಿಂದ ಯಡಿಯೂರಪ್ಪ ದೂರ ಉಳಿಯುವುದನ್ನು ತಪ್ಪಿಸಲು ಬಿಎಸ್ವೈ ಬೆಂಬಲಿತ ಓರ್ವನಿಗೆ ರಾಜ್ಯಸಭೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಹಾಗಾದಲ್ಲಿ ಲೆಹರ್ ಸಿಂಗ್ಗೆ ಅವಕಾಶ ಸಿಗಬಹುದೆಂದು ಅಂದಾಜಿಸಲಾಗಿದೆ.
ಎರಡು ಸ್ಥಾನಕ್ಕೆ ಬೇಕಾದ ಮತಗಳ ಜೊತೆ ಹೆಚ್ಚುವರಿ ಮತಗಳು ಬಿಜೆಪಿ ಬಳಿ ಇವೆ. ಮೂರನೇ ಅಭ್ಯರ್ಥಿ ಆಯ್ಕೆ ಮಾಡಲು 19 ಮತಗಳ ಕೊರತೆ ಇದೆ. ಎರಡು ಬಿಜೆಪಿ, ಒಂದು ಸ್ಥಾನ ಕಾಂಗ್ರೆಸ್ಗೆ ದಕ್ಕಲಿದ್ದು ನಾಲ್ಕನೇ ಸ್ಥಾನ ಅತಂತ್ರವಾಗಿದೆ. ಯಾವುದೇ ಪಕ್ಷಕ್ಕೂ ಸ್ವಂತವಾಗಿ ಗೆಲ್ಲುವ ಶಕ್ತಿ ಇಲ್ಲ. ಮತ್ತೊಂದು ಪಕ್ಷದ ಸದಸ್ಯರ ಮತಗಳ ಅಗತ್ಯವಿದೆ. ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾದರೂ ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲ ಬೇಕೇ ಬೇಕು. ಹಾಗಾಗಿ ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಸ್ವತಂತ್ರವಾಗಿ ಅಭ್ಯರ್ಥಿ ಕಣಕ್ಕಿಳಿಸುವ ಅಥವಾ ಪಕ್ಷದಿಂದ ಕಣಕ್ಕಿಳಿಸಿ ಎರಡನೇ ಪ್ರಾಶಸ್ತ್ಯದ ಮತಗಳ ಮೂಲಕ ಗೆಲ್ಲುವ ಲೆಕ್ಕಾಚಾರ ಹಾಕುತ್ತಿದೆ. ಅಲ್ಲದೇ ಅಡ್ಡ ಮತಗಳ ಬಗ್ಗೆ ಚಿಂತನೆ ನಡೆಸಿದೆ. ಕಳೆದ ಬಾರಿ ಅಡ್ಡ ಮತಗಳ ಮೂಲಕವೇ ಜಯಗಳಿಸಿದ್ದ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ ಅಥವಾ ಉದ್ಯಮಿ ಪ್ರಕಾಶ್ ಶೆಟ್ಟಿಗೆ ಟಿಕೆಟ್ ನೀಡಿ ಹೆಚ್ಚುವರಿ ಮತಗಳಿಸುವ ಟಾಸ್ಕ್ ಅವರಿಗೇ ಬಿಡುವ ಚಿಂತನೆ ನಡೆಸಿದೆ.
ಇದನ್ನೂ ಓದಿ: ಹೆಡಗೇವಾರ್, ಸಾವರ್ಕರ್ ಸ್ವಾತಂತ್ರ್ಯಕ್ಕೆ ಕೊಟ್ಟ ಕೊಡುಗೆ ಏನು?: ಸಾಹಿತಿ ಕುಂ.ವೀರಭದ್ರಪ್ಪ
ಎರಡು ಸ್ಥಾನದ ಜೊತೆ ಹೆಚ್ಚುವರಿ ಅಭ್ಯರ್ಥಿ ಆಯ್ಕೆಯಾದಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರದಿಂದ ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಆದರೆ ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ನಾಮ ಪತ್ರ ಸಲ್ಲಿಕೆಗೆ ಮೇ. 31 ಕಡೆಯ ದಿನವಾಗಿದ್ದು ಇಂದು ಅಥವಾ ನಾಳೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಲಿದ್ದು, ಅಚ್ಚರಿ ಆಯ್ಕೆ, ಮೂರನೇ ಅಭ್ಯರ್ಥಿ ಕಣಕ್ಕಿಳಿಸುವ ಚಿಂತನೆಗೆ ತೆರೆ ಬೀಳಲಿದೆ.