ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಬಿಜೆಪಿ ನಾಯಕರು ಶುಭಾಶಯ ತಿಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ರಾಜಭವನದಲ್ಲಿ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿಜೆಪಿ ಮುಖಂಡರು ಮುಖ್ಯಮಂತ್ರಿಗಳಿಗೆ ಶುಭ ಹಾರೈಸಿ, ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಲಿ ಎಂದು ಹಾರೈಸಿದ್ದಾರೆ.
ಅಭಿವೃದ್ಧಿ ಪರ್ವ ಮುಂದುವರೆಯಲಿದೆ: ಕುಮಾರ ಬಂಗಾರಪ್ಪ
ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿ, ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಶುಭಾಶಯಗಳು. ನಮ್ಮ ಭಾಗದ ಮುಖಂಡರಾಗಿ ಜನ ಸಂಪರ್ಕದಲ್ಲಿದ್ದ ಹಿರಿಯ ನಾಯಕರಿಗೆ ಇಂದು ಮುಖ್ಯಮಂತ್ರಿಯಾಗುವ ಅವಕಾಶ ಲಭಿಸಿದೆ.
ಬಿ.ಎಸ್ ಯಡಿಯೂರಪ್ಪನವರು ಕಳೆದ ಎರಡು ವರ್ಷದಿಂದ ರಾಜ್ಯವನ್ನು ಅಭಿವೃದ್ಧಿಯ ಮಾರ್ಗದಲ್ಲಿ ಕೊಂಡೊಯ್ದಿದ್ದರು. ಅದನ್ನು ಮುಂದೆ ಕೊಂಡೊಯ್ಯುವ ಜವಾಬ್ದಾರಿ ಇವರ ಮೇಲಿದೆ. ರಾಜ್ಯದ ಜನರು ಬಸವರಾಜ ಬೊಮ್ಮಾಯಿ ಮೇಲೆ ಸಾಕಷ್ಟು ಆಶಯ ಇಟ್ಟುಕೊಂಡಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ನಿರಂತರವಾಗಿ ಅಭಿವೃದ್ಧಿ ಕಾರ್ಯದಲ್ಲಿ ತೊಡಗಲಿದೆ ಎಂದರು.
ಇದೇ ವೇಳೆ ನಾನು ಸಹಜವಾಗಿಯೇ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗುವ ನಿರೀಕ್ಷೆ ಇದೆ. ಹೈಕಮಾಂಡ್ ನಾಯಕರು ಹಾಗೂ ರಾಜ್ಯ ನಾಯಕರು ಅವಕಾಶ ನೀಡಿದರೆ ಸಚಿವನಾಗಲು ಇಚ್ಚಿಸುತ್ತೇನೆ. ಖಾತೆಯ ಬಗ್ಗೆ ಮಾತನಾಡಲು ಇನ್ನೂ ಸಾಕಷ್ಟು ಕಾಲಾವಕಾಶ ಇದೆ ಎಂದರು.
ಶಾಸಕ ರಾಜಕುಮಾರ್ ಮಾತನಾಡಿ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನೀಡಲಿದ್ದಾರೆ. ಎರಡು ಮೂರು ದಿನಗಳಲ್ಲಿ ಉತ್ತಮವಾದ ಸಚಿವ ಸಂಪುಟ ರಚಿಸಿ ರಾಜ್ಯದ ಜನರು ಮೆಚ್ಚುವ ರೀತಿ ಸರ್ಕಾರ ನೀಡಲಿದ್ದಾರೆ. ಇದು ಕೇವಲ ಬಿಜೆಪಿ ಶಾಸಕರ ಆಯ್ಕೆ ಮಾತ್ರವಲ್ಲ, ರಾಜ್ಯದ ಆರೂವರೆ ಕೋಟಿ ಜನರ ಆಯ್ಕೆಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರಿಗೆ ಹಾಗೂ ರಾಜ್ಯದ ಜನತೆಗೆ ಒಳ್ಳೆಯದಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ ಎಂದರು.
ಹೆಮ್ಮ ಮತ್ತು ಸಂತಸ ತಂದಿದೆ: ಸುರೇಶ್ ಕುಮಾರ್
ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರ ಆಯ್ಕೆ ನಮಗೆ ಹೆಮ್ಮೆ ಹಾಗೂ ಸಂತಸ ತಂದಿದೆ. ಬಸವರಾಜ್ ಬೊಮ್ಮಾಯಿ ನಮ್ಮ ಮಧ್ಯೆ ಇರುವ ಅನುಭವಿ ನೇತಾರರಲ್ಲಿ ಒಬ್ಬರು. ಅವರ ನಾಯಕತ್ವ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಸಹಾಯವಾಗಲಿದೆ ಎಂಬ ವಿಶ್ವಾಸ ನನಗಿದೆ ಎಂದರು.
ರಾಜ್ಯವನ್ನ ಅತ್ಯಂತ ಎತ್ತರದ ಸ್ಥಾನದಲ್ಲಿ ನೋಡಲು ನಾವು ಬಯಸುತ್ತೇವೆ. ರಾಜ್ಯ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಯಾವುದೇ ಗೊಂದಲವಿಲ್ಲದೆ ಹೊಸ ನಾಯಕರ ಘೋಷಣೆ ಹಾಗೂ ಇಂದು ಮುಖ್ಯಮಂತ್ರಿಗಳ ಪದಗ್ರಹಣ ಆಗಿದೆ. ಆದಷ್ಟು ಬೇಗ ಸಚಿವ ಸಂಪುಟ ರಚನೆ ಆಗಲಿದ್ದು, ಉತ್ತಮ ಆಡಳಿತ ಸಿಗಲಿದೆ ಎಂಬ ವಿಶ್ವಾಸವನ್ನು ಸುರೇಶ್ ಕುಮಾರ್ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಆಶೀರ್ವಾದ ಇದೆ; ಗೋ ಮಧುಸೂದನ್
ವಿಧಾನ ಪರಿಷತ್ ಮಾಜಿ ಸದಸ್ಯ ಗೋ ಮಧುಸೂದನ್ ಮಾತನಾಡಿ, ಇಂದು ಒಂದು ಪವಿತ್ರವಾದ ದಿನ. ಯತಿ ಪಂಚಮಿ ಎಂಬ ಹೆಸರಿನಲ್ಲಿ ಕರೆಸಿಕೊಳ್ಳುವ ಈ ದಿನ, ದೇಶದ ಎಲ್ಲಾ ಯತಿಗಳು ಚಾತುರ್ಮಾಸದ ಸಂಕಲ್ಪ ಮಾಡುವ ಪವಿತ್ರವಾದ ದಿನವಾಗಿದೆ. ಇಂತಹ ದಿನ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಬೆಂಬಲ ಹಾಗೂ ಆಶೀರ್ವಾದದಿಂದ ಬೊಮ್ಮಾಯಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಮುಂದೆ ಸಾಕಷ್ಟು ಸವಾಲುಗಳಿವೆ ಅದನ್ನ ಚತುರತೆಯಿಂದ ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ರಾಜ್ಯಕ್ಕೆ ಅವರು ಹೊಸಬರಲ್ಲ, ಅವರ ತಂದೆ ಕೂಡ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನ ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ ಮತ್ತು ಯಶಸ್ವಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಸಂಪುಟ ವಿಸ್ತರಣೆ ವರಿಷ್ಠರು ನಿರ್ಧಾರ ಮಾಡ್ತಾರೆ: ಅಶ್ವಥ್ ನಾರಾಯಣ
ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಮಾತನಾಡಿ, ಸಂಪುಟಕ್ಕೆ ಯಾರು ಇರಬೇಕು ಎಂದು ನೂತನ ಸಿಎಂ ಹಾಗೂ ವರುಷ್ಠರು ನಿರ್ಧಾರ ಮಾಡಲಿದ್ದಾರೆ. ಯಾರಿಗೆ ಜವಾಬ್ದಾರಿ ಕೊಡುತ್ತಾರೋ ಅವರು ಸಂಪುಟದಲ್ಲಿ ಮುಂದುವರೆಯಲಿದ್ದಾರೆ. ವರಿಷ್ಠರು ನಿಶ್ಚಯ ಮಾಡಿದಂತೆ ಆಗಲಿದೆ. ಸಂಪುಟ ಸೇರಲೇಬೇಕು ಎನ್ನುವ ನಿರೀಕ್ಷೆ ಇಲ್ಲ, ಅಂತಹ ಸ್ಥಿತಿ, ರಾಜಕೀಯ ಬುದ್ದಿ ನನಗಿಲ್ಲ, ನಾನು ದೆಹಲಿಗೂ ಹೋಗಲ್ಲ ಎಂದರು.
ಉತ್ತರ ಕರ್ನಾಟಕಕ್ಕೆ ಕೊಡುಗೆ: ಉಮೇಶ್ ಕತ್ತಿ
ಮಾಜಿ ಸಚಿವ ಉಮೇಶ್ ಕತ್ತಿ ಮಾತನಾಡಿ, ಬಸವರಾಜ ಬೊಮ್ಮಾಯಿ ಇಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅಖಂಡ ಕರ್ನಾಟಕದ ಏಳಿಗೆಗೆ ಬೊಮ್ಮಾಯಿ ಕೊಡುಗೆ ನೀಡಲಿದ್ದಾರೆ. ರಾಜ್ಯಕ್ಕೆ ಒಬ್ಬನೇ ಮುಖ್ಯಮಂತ್ರಿ ಆಗಲು ಸಾಧ್ಯ ಎಲ್ಲರೂ ಆಗಲು ಸಾಧ್ಯವಿಲ್ಲ. ನಾವು ಬಸವರಾಜ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಇರುತ್ತೇವೆ. ರಾಜ್ಯದಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಡುವ ಸಾಧ್ಯತೆ ಬಗ್ಗೆ ಮಾತನಾಡಿ, ನಾನು ಕೂಡ ಹೊಸ ಮುಖವೇ. ಹಿಂದಿನ ಎರಡು ವರ್ಷ ನಾನು ಅಧಿಕಾರದಲ್ಲಿ ಇರಲಿಲ್ಲ. ಹೀಗಾಗಿ ನಾನು ಕೂಡ ಹೊಸ ಮುಖವೇ ಎಂದು ಹೇಳಿದರು.