ಬೆಂಗಳೂರು: ಉಪಸಮರದ ಕಾವು ರಾಜ್ಯದಲ್ಲಿ ಇನ್ನೂ ತಣ್ಣಗಾಗಿಲ್ಲ. ಒಂದು ಕಡೆ ಅಭ್ಯರ್ಥಿಗಳು ಉಪ ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷ ಗೆಲ್ಲುವ ಭರವಸೆ ಇಟ್ಟಕೊಂಡಿದ್ದಾರೆ. ಇತ್ತ ಇಷ್ಟು ದಿನ ಎದುರಾಳಿಗಳು ಏನೇ ಆರೋಪ ಮಾಡಿದರೂ ಸುಮ್ಮನಿದ್ದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ, ಈಗ ಜೆಡಿಎಸ್ ಅಭ್ಯರ್ಥಿ ವಿರುದ್ಧ ಗುಡುಗಿದ್ದಾರೆ.
ದುಷ್ಟರ ಸಂಹಾರಕ್ಕೆ ಕೊಲ್ಲೂರು ಮೂಕಾಂಬಿಕೆಯ ಪೂಜೆಗೆ ಬಂದಿರುವೆ ಎಂಬ ಜೆಡಿಎಸ್ ಅಭ್ಯರ್ಥಿ ಮಾತಿಗೆ ಪ್ರತಿಕ್ರಿಯಿಸಿರುವ ಗೋಪಾಲಯ್ಯ, ಅವರು ಭ್ರಮೆಯಲ್ಲಿದ್ದಾರೆ, ಯಾವುದೋ ಲೋಕದಿಂದ ಹುಟ್ಟಿ ಬಂದಿರಬೇಕು. ಎಲ್ಲಿಂದಲೋ ಬಂದು ಇಲ್ಲಿ 10 ಮನೆಯಲ್ಲಿ ಸರಿಯಾಗಿ ವೋಟು ಕೇಳಿಲ್ಲ. ನಾನು ಶಾಸಕನಾದ ಮೇಲೆ ಯಾವುದಾದ್ರೂ ಮಾಧ್ಯಮಗಳ ಮುಂದೆ ಚರ್ಚೆಗೆ ಬರಲಿ. ಯಾವುದೇ ದಾಖಲೆ ಇಲ್ಲದೆ ಮಾತನಾಡಿ, ಓಡಿ ಹೋಗೋದು ಅಲ್ಲಎಂದು ಜೆಡಿಎಸ್ ಅಭ್ಯರ್ಥಿ ಡಾ.ಗಿರೀಶ್ ಕೆ.ನಾಶಿಗೆ ಸವಾಲು ಹಾಕಿದರು.
ಇನ್ನು ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುವೆ, ಯಾರನ್ನೇ ಕೇಳಿದರು ಬಿಜೆಪಿಗೆ ಮತಹಾಕಿರುವುದಾಗಿ ಹೇಳುತ್ತಿದ್ದಾರೆ. ಮಹಾಲಕ್ಷ್ಮಿ ಲೇಔಟ್ನ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಜೆಡಿಎಸ್ ಗೆಲ್ಲಲು ಸಾಧ್ಯವಿಲ್ಲ ಎಂದು ಗೋಪಾಲಯ್ಯ ಹೇಳಿದರು.