ಬೆಂಗಳೂರು: ಕೇಂದ್ರ ಸರ್ಕಾರ ಅನ್ಲಾಕ್ 5.0 ಆದೇಶ ಹೊರಡಿಸಿದ್ದು, ಅದರಂತೆ ಅಕ್ಟೋಬರ್ 15ರಿಂದ ಸಿನಿಮಾ ಪ್ರದರ್ಶನ, ಸ್ವಿಮ್ಮಿಂಗ್ ಪೂಲ್ಗಳನ್ನು ತೆರೆಯಲು ಷರತ್ತು ಬದ್ದ ಅನುಮತಿ ನೀಡಿದೆ. ಪ್ಯಾಸೆಂಜರ್ ರೈಲುಗಳ ಸಂಚಾರ ಇನ್ನಷ್ಟೇ ಆರಂಭವಾಗಬೇಕಿದೆ.
ಈಗಾಗಲೇ ಅನ್ಲಾಕ್ 4.0 ಆಗಿದ್ದು, ಎಲ್ಲಾ ಚಟುವಟಿಕೆಗಳು ಗರಿಗೆದರಿವೆ. ಆದರೆ, ಕೊರೊನಾ ಇಲ್ಲವೆನೋ ಎಂಬ ಭ್ರಮೆಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುತ್ತಿಲ್ಲ. ಕನಿಷ್ಠ ಪಕ್ಷ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಸ್ಯಾನಿಟೈಸರ್ ಬಳಕೆಯಂತೂ ಇಲ್ಲವೇ ಇಲ್ಲ. ಇದು ನಗರ ಸೇರಿದಂತೆ ರಾಜ್ಯದ ಬಹುತೇಕ ಕಡೆ ಇದೇ ಪರಿಸ್ಥಿತಿಯಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,47,712ಕ್ಕೆ (ಅಕ್ಟೋಬರ್ 5ರವರೆಗೆ) ಏರಿದೆ. ಅದರಲ್ಲಿ 9,370 ಮಂದಿ ಮೃತಪಟ್ಟಿದ್ದು, 5,22,846 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಈ ಅಂಕಿ-ಅಂಶ ಗಮನಿಸಿದರೆ ಕೊರೊನಾ ಕಡೆಗಣಿಸಿದರೆ ಅಪಾಯ ಖಚಿತ ಎಂಬುದನ್ನು ಸೂಚಿಸುತ್ತದೆ.
ಹೀಗಾಗಿ, ಬಸ್ ನಿಲ್ದಾಣ, ರೈಲು ಹಾಗೂ ಮೆಟ್ರೊ ನಿಲ್ದಾಣ, ಮಾಲ್, ಚಿತ್ರಮಂದಿರ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಅಕ್ಟೋಬರ್ 2ರಿಂದ ಜಾರಿಯಾಗುವಂತೆ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದೆ. ನಿಯಮ ಮುರಿದರೆ ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿರುವುದು ಶಾಘ್ಲನೀಯ.
ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದ ಕಾರಣ ಅದರ ನೇರ ಪರಿಣಾಮ ಯುವ ಜನಾಂಗದ ಮೇಲೆ ಬೀರಿದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಬಹುತೇಕ ರೋಗಿಗಳಲ್ಲಿ ಮಧ್ಯ ವಯಸ್ಸಿವರೇ ಹೆಚ್ಚು. 1,452 ರೋಗಿಗಳು ಕೊರೊನಾ ಚಿಕಿತ್ಸೆ ಪಡೆದಿದ್ದು, ಅದರಲ್ಲಿ 172 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೆ.ಸಿ.ಜನರಲ್ ಆಸ್ಪತ್ರೆ ಮುಖ್ಯ ಅಧೀಕ್ಷಕ ವೆಂಕಟೇಶಯ್ಯ ಎಂದು ಆತಂಕ ವ್ಯಕ್ತಪಡಿಸಿದರು.