ಬೆಂಗಳೂರು: ರಾಜಧಾನಿಯಲ್ಲಿ ಬರೋಬ್ಬರಿ 576 ಕಿ.ಮೀ ರಸ್ತೆ ಗುಂಡಿ ಮುಚ್ಚುವ ಕಾರ್ಯ ಬಾಕಿಯಿದ್ದು, ಇದಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆಸಲು ಬಿಬಿಎಂಪಿ ಮುಂದಾಗಿದೆ. ರಸ್ತೆ ಗುಂಡಿ ವಿಚಾರ ಸಂಬಂಧ ಹೈಕೋರ್ಟ್ಗೆ ಬಿಬಿಎಂಪಿ ಮಾಹಿತಿ ನೀಡಿದ್ದು, ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್‌ಟಿಎಸ್) ಸಂಸ್ಥೆ ಜಂಟಿಯಾಗಿ ನಡೆಸಿದ ಸರ್ವೆ ಪ್ರಕಾರ 847.56 ಕಿ.ಮೀ ಒಟ್ಟು ರಸ್ತೆಗುಂಡಿ ಸರಿಪಡಿಸಬೇಕಾಗಿತ್ತು ಎಂದು ಕೋರ್ಟ್ಗೆ ಪಾಲಿಕೆ ಮಾಹಿತಿ ನೀಡಿದೆ.
ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆಗೆ ಪೈಥಾನ್ ಯಂತ್ರ ಬಳಸಿ ನಗರದ 397 ಕಿ.ಮೀ. ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಇನ್ನುಳಿದ 576 ಕಿ.ಮೀ ರಸ್ತೆ ಗುಂಡಿ ಮುಚ್ಚಲು ಟೆಂಡರ್ ಕರೆಯಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳ ಪ್ರಗತಿ ವರದಿ ಸಲ್ಲಿಸಿ - ಹೈಕೋರ್ಟ್: ರಸ್ತೆ ಗುಂಡಿ ಮುಚ್ಚುವ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಸಲಹೆ ನೀಡಿದ ಹೈಕೋರ್ಟ್, ರಸ್ತೆ ಸರಿಪಡಿಸುವವರೆಗೆ ಪಿಐಎಲ್ ಮುಕ್ತಾಯಗೊಳಿಸುವುದಿಲ್ಲ ಎಂದು ವಿಚಾರಣೆಯನ್ನು ಜುಲೈ 27 ಕ್ಕೆ ನಿಗದಿಪಡಿಸಿತ್ತು. ಅಷ್ಟರಲ್ಲಿ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಆಗಿರುವ ಪ್ರಗತಿಯ ಕುರಿತು ವಿವರ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಮಹಾನಗರದಲ್ಲಿ ಯಾವ್ಯಾವ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂಬ ಬಗ್ಗೆ ವಸ್ತುಸ್ಥಿತಿ ವರದಿ ಸಲ್ಲಿಸಲು ಹೈಕೋರ್ಟ್ ಆಗಸ್ಟ್ 3 ರವರೆಗೆ ಬಿಬಿಎಂಪಿಗೆ ಗಡುವು ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಕೋರಮಂಗಲದ ವಿಜಯನ್ ಮೆನನ್ 2015ರಲ್ಲಿ ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ನಿನ್ನೆ ವಿಚಾರಣೆ ನಡೆಸಿತು.
ಆದೇಶದ ಅನುಪಾಲನಾ ವರದಿ ಸಿದ್ಧ: ಸದ್ಯ ಆದೇಶದ ಅನುಪಾಲನಾ ವರದಿ ಸಿದ್ಧವಿದೆ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಬೇಕಿದೆ ಎಂದು ಕೋರ್ಟ್ಗೆ ಪಾಲಿಕೆ ತಿಳಿಸಿದೆ.