ಬೆಂಗಳೂರು: ಅನಧಿಕೃತವಾಗಿ ಅಳವಡಿಕೆ ಮಾಡಲಾಗಿದ್ದ ಬ್ಯಾನರ್, ಫ್ಲೆಕ್ಸ್ ಹಾಗೂ ಬಂಟಿಗ್ಗಳನ್ನ ತೆರವುಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಒಂದೇ ದಿನ 1,200ಕ್ಕೂ ಅಧಿಕ ಫ್ಲೆಕ್ಸ್ ತೆರವುಗೊಳಿಸಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತ ಗೌರವ್ ಗುಪ್ತ ಎಲ್ಲ ವಲಯ ಮುಖ್ಯ ಇಂಜಿನಿಯರ್ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಗುರುವಾರದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಫೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತ ಗೌರವ್ ಗುಪ್ತ ನಿರ್ದೇಶಿಸಿದ ಹಿನ್ನಲೆಯಲ್ಲಿ ನಗರದಲ್ಲಿ ಎಲ್ಲೆಲ್ಲಿ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆ ಅವುಗಳನ್ನು ತಕ್ಷಣವೇ ತೆರವು ಕಾರ್ಯ ನಡೆಸಲಾಯಿತು.
ಪಾಲಿಕೆಯ ಎಲ್ಲ ಎಂಟು ವಲಯಗಳಲ್ಲಿ ಮುಖ್ಯ ಇಂಜಿನಿಯರ್ಗಳ ನೇತೃತ್ವದ ತಂಡವು ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್, ಬಂಟಿಗ್ಗಳ ತೆರವು ಕಾರ್ಯಾಚರಣೆ ತೀವ್ರಗತಿಯಲ್ಲಿ ನಡೆಸುತ್ತಿದ್ದು, ರಸ್ತೆ ಬದಿಯ ವಿದ್ಯುತ್ ಕಂಬ, ಪಾದಚಾರಿ ಮಾರ್ಗ, ರಾಜಕಾಲುವೆಗೆ ಅಳವಡಿಸಿರುವ ಫೆನ್ಸಿಂಗ್ಗಳ ಮೇಲಿನ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ.
ಪಾಲಿಕೆ ವ್ಯಾಪ್ತಿಯ ಮಾರತಹಳ್ಳಿ, ವೈಟ್ ಫೀಲ್ಡ್, ಹೂಡಿ, ಹೆಚ್ಬಿಆರ್ ಲೇಔಟ್, ಯಲಹಂಕ, ಥಣಿಸಂದ್ರ ಮುಖ್ಯ ರಸ್ತೆ, ರಾಜಾಜಿನಗರ, ಹೆಚ್ಎಸ್ಆರ್ ಲೇಔಟ್, ಬೇಗೂರು ಮುಖ್ಯ ರಸ್ತೆ, ಅಂಜನಾಪುರ, ಜ್ಞಾನ ಭಾರತಿ ಲೇಔಟ್, ದಾಸರಹಳ್ಳಿ ಸೇರಿದಂತೆ ಇನ್ನಿತರೆ ಕಡೆ ಫ್ಲೆಕ್ಸ್ಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.
1,200ಕ್ಕೂ ಹೆಚ್ಚು ಫ್ಲೆಕ್ಸ್ಗಳ ತೆರವು: ಎಲ್ಲೆಲ್ಲಿ ಫ್ಲೆಕ್ಸ್ಗಳನ್ನು ಅಳವಡಿಸಲಾಗಿದೆಯೋ ಅದನ್ನೆಲ್ಲ ತೆರವು ಮಾಡುವ ಕಾರ್ಯ ನಡೆಯುತ್ತಿದ್ದು, ನಿನ್ನೆ ನಗರದಾದ್ಯಂತ ಸುಮಾರು 1,200ಕ್ಕೂ ಹೆಚ್ಚು ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೇ ಅನಧಿಕೃತ ಫ್ಲೆಕ್ಸ್ಗಳ ತೆರವು ಕಾರ್ಯಚರಣೆ ಮುಂದುವರೆಯಲಿದೆ ಎಂದು ಹೇಳಿದೆ.