ಬೆಂಗಳೂರು: ಎರಡನೇ ಹಂತದ ಅನ್ಲಾಕ್ ವೇಳೆ ಬೆಂಗಳೂರಲ್ಲಿ ಏನೆಲ್ಲಾ ಇರಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕೋವಿಡ್ ಪ್ರಕೋಪದ ವೇಳೆಗೆ ಹಲವು ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು. ಯಾವುದಕ್ಕೆಲ್ಲಾ ಅವಕಾಶ ನೀಡಬೇಕು ಎಂಬ ಬಗ್ಗೆ ಸರ್ಕಾರದ ಹಂತದಲ್ಲಿ ಚಿಂತನೆ ನಡೆಯುತ್ತಿದೆ ಎಂದರು.
ಜನರ ಪ್ರಮುಖ ಬೇಡಿಕೆ ಮೊದಲು ಈಡೇರಿಸಲು ಅವಕಾಶ ಕೊಡಲಾಗುವುದು. ದಿನನಿತ್ಯದ ಅವಶ್ಯಕತೆಗಳು, ಫ್ಯಾಕ್ಟರಿ ಕೆಲಸಗಳು, ಕಟ್ಟಡ ಕೆಲಸಗಳಿಗೆ ಬೇಕಾದ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ. ಒಮ್ಮೆಲೇ ಎಲ್ಲವನ್ನೂ ತೆರೆಯದೆ, ಹಂತಹಂತವಾಗಿ ಸಮಯ ಇಟ್ಟು ತೆರೆಯಲು ಅವಕಾಶ ಕೊಡಲಾಗುವುದು. ಆರೋಗ್ಯದ ದೃಷ್ಟಿಯಿಂದ ಹೋಟೆಲ್ ನಲ್ಲಿ ಕುಳಿತು ಊಟ ಮಾಡುವ ಅವಕಾಶವನ್ನು ಬಹಳ ಯೋಚಿಸಿ ಅನುವು ಮಾಡಲಾಗುವುದು ಎಂದು ಮುನ್ಸೂಚನೆ ನೀಡಿದರು.
ಓದಿ:ಅನ್ಲಾಕ್ ನಲ್ಲೂ ಕೊರೊನಾ ನಿಯಂತ್ರಣಕ್ಕೆ ಬಿಬಿಎಂಪಿ ರಣತಂತ್ರ: ಹೊಸ ಆದೇಶದಲ್ಲಿ ಏನಿದೆ ಗೊತ್ತಾ?
ಮಾರುಕಟ್ಟೆಗಳು ಕೂಡಾ ಪ್ರಮುಖವಾಗಿದ್ದು, ಹೆಚ್ಚು ಜನ ಸೇರದಂತೆ ಮಾಡಲು ಮಾರುಕಟ್ಟೆ ತೆರೆಯದಿರಲು ಚಿಂತಿಸಲಾಗಿದೆ. ಮಾಲ್, ಸಿನಿಮಾ ಮಂದಿರಗಳನ್ನು ನಿಯಂತ್ರಣ ಇಲ್ಲದೆ ತೆರೆದರೆ ಕೋವಿಡ್ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದರು. ದೇವಸ್ಥಾನ, ಮದುವೆ, ಸಮಾರಂಭಗಳಲ್ಲೂ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಯಾವ ಹಂತದಲ್ಲಿ ತೆರೆಯಬೇಕು ಎಂದು ತಜ್ಞರ ಅಭಿಪ್ರಾಯದ ಪ್ರಕಾರ ನಿರ್ಧರಿಸಲಾಗುವುದು ಎಂದರು.
ಸೋಂಕು ಹೆಚ್ಚು ಇದ್ದಾಗ ವಾರ್ ರೂಂಗಳ ಸಿಬ್ಬಂದಿ ಸಂಖ್ಯೆ, ಶವ ಸಾಗಾಣಿಕೆಯ ವಾಹನ, ಆಂಬ್ಯುಲೆನ್ಸ್ ಗಳ ಸಂಖ್ಯೆ ಹೆಚ್ಚು ಇದ್ದವು, ಇದನ್ನು ಕಡಿಮೆ ಮಾಡಬೇಕಿದೆ ಎಂದರು. ಅದೇ ರೀತಿ ಫೀಲ್ಡ್ ಹಂತದಲ್ಲಿ ಇರುವ ಟ್ರಯಾಜಿಂಗ್ ಸೆಂಟರ್, ಟೆಸ್ಟಿಂಗ್ ಪ್ರಮಾಣ ಮುಂದುವರಿಸಲಾಗುವುದು ಎಂದು ಗೌರವ್ ಗುಪ್ತಾ ಹೇಳಿದರು.