ಬೆಂಗಳೂರು : ರಾಜ್ಯ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿದ ಬಿಬಿಎಂಪಿ ಹೊಸ ವಿಧೇಯಕದಿಂದ ಬೆಂಗಳೂರಿನ ಹೊರವಲಯಕ್ಕೆ ಹೆಚ್ಚು ಅನುಕೂಲವಾಗಿದೆ. ಈ ವಿಧೇಯಕದ ಅನ್ವಯ, ಮಹಾನಗರ ಪಾಲಿಕೆ ವ್ಯಾಪ್ತಿ 1 ಕಿಲೋಮೀಟರ್‌ಗೆ ಹೆಚ್ಚಲಿದೆ.
ಈ ವಿಧೇಯಕದಿಂದಾಗಿ ಬೆಂಗಳೂರು ಸುತ್ತಮುತ್ತಲಿನ 400 ಮೀಟರ್ ಒಳಗಿನ ಹಳ್ಳಿಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಲಿವೆ. ಹೊರವಲಯದಲ್ಲಿ ಮೂಲಸೌಕರ್ಯಗಳಿಲ್ಲದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದ ಹಳ್ಳಿಗಳಿಗೆ ಮೂಲಸೌಕರ್ಯ ಸಿಗುವಂತಾಗುತ್ತದೆ.
ಮಹಾನಗರ ಪಾಲಿಕೆ ವ್ಯಾಪ್ತಿ ಹೊರಗಿನ ಆನೇಕಲ್, ಬೆಂಗಳೂರು ದಕ್ಷಿಣ ತಾಲೂಕುಗಳ ಕೆಲವು ಗ್ರಾಮಗಳು ಜಿಲ್ಲಾಡಳಿತ ಮತ್ತು ಬಿಬಿಎಂಪಿ ಎರಡರಿಂದಲೂ ಮೂಲ ಸೌಲಭ್ಯ ಸಿಗದೆ ಸಮಸ್ಯೆ ಎದುರಿಸುತ್ತಿದ್ದವು.
ಅಲ್ಲಿನ ನಿವಾಸಿಗಳು ಶುದ್ಧ ಕುಡಿಯುವ ನೀರು, ಸುವ್ಯವಸ್ಥಿತ ರಸ್ತೆ, ಪಾರ್ಕ್, ಗ್ರಂಥಾಲಯ ಮತ್ತಿತರ ಸೌಲಭ್ಯದಿಂದ ವಂಚಿತರಾಗಿದ್ದರು. ಬಿಬಿಎಂಪಿ ಹೊಸ ಕಾಯಿದೆ ಪ್ರಕಾರ, ಗಡಿಯ ವಿಸ್ತರಣೆಯಿಂದ ಉತ್ತಮ ಮೂಲಸೌಕರ್ಯ ಲಭ್ಯವಾಗಲಿವೆ.
ಆಸ್ತಿಗಳಿಗೆ 'ಎ' ಖಾತೆ ಲಭ್ಯತೆ : ಬಿಬಿಎಂಪಿ ವ್ಯಾಪ್ತಿಗೆ ಭೂಮಿ ಒಳಪಟ್ಟಲ್ಲಿ ಲೇಔಟ್ ನಿರ್ಮಾಣ, ಕಟ್ಟಡ ನಕ್ಷೆ, ವಸತಿ ಮನೆಗಳಿಗೆ ಸೂಕ್ತ ರೀತಿಯ ಅನುಮತಿ ಪಡೆದಲ್ಲಿ ಆಸ್ತಿಗಳಿಗೆ 'ಎ' ಖಾತೆ ಲಭ್ಯವಾಗಲಿದೆ. ಇದರ ಜೊತೆಗೆ ಈಗಾಗಲೇ ಕಂದಾಯ ಭೂಮಿಯಲ್ಲಿ ಲೇಔಟ್ ನಿರ್ಮಿಸಿ ಅಥವಾ ತಮ್ಮ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಲ್ಲಿ ಅವುಗಳಿಗೆ 'ಬಿ' ಖಾತೆ ಮಾನ್ಯತೆ ದೊರೆಯಲಿದೆ. ಪಾಲಿಕೆ ಮೂಲಸೌಕರ್ಯ ಕಲ್ಪಿಸಲಿದೆ. ಸುಪ್ರೀಂಕೋರ್ಟ್ ಅಂಗಳದಲ್ಲಿರುವ ಅಕ್ರಮ-ಸಕ್ರಮ ಕಾಯಿದೆಗೆ ಗ್ರೀನ್ ಸಿಗ್ನಲ್ ಸಿಕ್ಕಿದಲ್ಲಿ ಎಲ್ಲ ಆಸ್ತಿಗಳು ಕೂಡ ಸಕ್ರಮವಾಗುವ ಸಾಧ್ಯತೆಯಿದೆ.
ಹಳ್ಳಿಗಳಿಗೆ ಕಾವೇರಿ ನೀರು : ಬೆಂಗಳೂರು ಹೊರವಲಯದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಜಲಮಂಡಳಿ ವತಿಯಿಂದ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಕಾಮಗಾರಿ ಮಾಡಲಾಗುತ್ತಿದೆ. ಈ 5ನೇ ಹಂತದ ಯೋಜನೆಯನ್ನು ಉಳಿದ ಹಳ್ಳಿಗಳಿಗೂ ವಿಸ್ತರಣೆ ಮಾಡುವ ಸಾಧ್ಯತೆ ಇದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪೂರ್ಣಗೊಳ್ಳುವ ಎಲ್ಲಾ ಗಡಿ ಭಾಗದ ರಸ್ತೆಗಳ ಇಕ್ಕೆಲಗಳು, ಕಲ್ಲು ಕ್ವಾರಿ, ಕೆರೆಗಳ ಏರಿ ಮೇಲೆ ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಘನತ್ಯಾಜ್ಯ ಎಸೆಯಲಾಗುತ್ತಿತ್ತು. ಇದರಿಂದ ಪಾಲಿಕೆ ಪಕ್ಕದಲ್ಲಿದ್ದ ಹಳ್ಳಿಗಳಲ್ಲಿ ಸ್ವಚ್ಛತೆ ಕೊರತೆ ಎದುರಾಗಿತ್ತು. ಬಿಬಿಎಂಪಿ ವ್ಯಾಪ್ತಿಗೆ ಸೇರುವುದಿಲ್ಲ ಎಂದು ಪೌರಕಾರ್ಮಿಕರು ಸ್ವಚ್ಛತೆ ಕೈ ಬಿಡುತ್ತಿದ್ದರು. ಗಡಿ ವಿಸ್ತರಣೆಯಾದ್ರೆ ಮಹಾನಗರ ಪಾಲಿಕೆ ಹೊರವಲಯದ ಎಲ್ಲ ಮೂಲಗಳಲ್ಲಿನ ಸ್ವಚ್ಛತೆ ಸಮಸ್ಯೆಗೆ ಪರಿಹಾರ ಸಿಗುವಂತಾಗುತ್ತದೆ.