ಬೆಂಗಳೂರು: ಸೋಂಕಿತರಿಗೆ ತಕ್ಷಣ ಆಂಬುಲೆನ್ಸ್ ಕಳಿಸಿ ಕೂಡಲೇ ಆಸ್ಪತ್ರೆಗೆ ಸೇರಿಸಲು ಮುಂದಾಗಬೇಕಿತ್ತು. ಆ ಸಂದರ್ಭದಲ್ಲಿ ಹೋಗಿರುವ ಆಂಬುಲೆನ್ಸ್ ಮನೆಯಿಂದ ದೂರ ನಿಂತಿತ್ತು. ಮನೆಯಿಂದ ನಡೆದುಕೊಂಡು ಬಂರುವಾಗ ರೋಗಿ ಕುಸಿದು ಬಿದ್ದಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ. ಹೆಚ್. ಅನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದರು.
ಇಂತಹ ಘಟನೆ ನಡೆಯಬಾರದಿತ್ತು. ಈ ಪ್ರಕರಣವನ್ನು ತನಿಖೆ ಮಾಡಲಾಗುವುದು. ಆಡಳಿತ ಉಪ ಆಯುಕ್ತ ಲಿಂಗಮೂರ್ತಿ ಅವರನ್ನು ನೇಮಕ ಮಾಡಿ ತನಿಖೆಗೆ ಆದೇಶಿಸಲಾಗಿದೆ. ಘಟನೆಗೆ ಕಾರಣ ಕರ್ತರಾದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರನ್ನು ಡಿಸ್ಚಾರ್ಜ್ ಮಾಡುತ್ತಿರುವ ಮಾಹಿತಿ ಕೇವಲ ವಿಕ್ಟೋರಿಯಾ ಆಸ್ಪತ್ರೆಯಿಂದ ಮಾತ್ರ ಲಭ್ಯವಾಗುತ್ತಿದ್ದು, ಅದರ ಮಾಹಿತಿ ಮಾತ್ರ ಪ್ರಕಟಿಸಲಾಗುತ್ತಿದೆ. ಉಳಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮಾಹಿತಿ ಕಲೆ ಹಾಕಲು ಈಗಾಗಲೇ ಒಂದು ತಂಡ ರಚಿಸಲಾಗಿದೆ. ಆ ತಂಡದವರು ಕಾರ್ಯಪ್ರವೃತ್ತರಾಗಿದ್ದು, ಪ್ರತಿ ಆಸ್ಪತ್ರೆಗೆ ತೆರಳಿ ಸೋಂಕಿತರು ಮಾಹಿತಿ ಕಲೆಹಾಕುತ್ತಿದ್ದಾರೆ. ಇಂದಿನ ಬುಲೆಟಿನ್ನಲ್ಲಿ ಅದನ್ನು ಪ್ರಕಟಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಸೋಂಕಿತರ ಸಂಖ್ಯೆ ಪ್ರತಿದಿನ ಸಾವಿರದ ಗಡಿ ಮುಟ್ಟುತ್ತಿದ್ದು, ಗುಣಮುಖರಾದವರು ಮಾತ್ರ 100- 200ರ ಹತ್ತಿರದಲ್ಲಿದೆ. ಈವರೆಗೆ 7,173 ಸೋಂಕಿತರಲ್ಲಿ ಕೇವಲ 770 ಮಂದಿ ಗುಣಮುಖರಾದ ಮಾಹಿತಿ ದಾಖಲಾಗಿತ್ತು. ನಾಳೆ ಸಂಪೂರ್ಣ ವಿವರ ನೀಡಲಾಗುವುದು ಎಂದರು.