ಬೆಂಗಳೂರು: ನಗರದಲ್ಲಿ ಅನಧಿಕೃತ ಪ್ರತಿಮೆಗಳ ನಿರ್ಮಾಣ ವಿಚಾರವಾಗಿ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿತ್ತು. ಅನಧಿಕೃತ ಹಾಗೂ ನಿಯಮಬಾಹಿರವಾಗಿ ಅಕ್ರಮವಾಗಿ ನಿರ್ಮಾಣ ಮಾಡಿ, ನಗರದ ಹಲವೆಡೆ ಪ್ರತಿಷ್ಠಾಪಿಸಿದ ಪುತ್ಥಳಿಗಳ ತೆರವಿಗೂ ಸೂಚಿಸಿತ್ತು.
ಇದೀಗ ಅಗಲಿದ ನಟನ ಪುತ್ಥಳಿ ಸ್ಥಾಪನೆಗೂ ಹಲವಾರು ಕಡೆ ಬೇಡಿಕೆ ಬರುತ್ತಿದ್ದು, ಬಿಬಿಎಂಪಿ ಅನುಮತಿ ನೀಡಲಿದೆಯಾ, ತಡೆಹಿಡಿಯಲಿದೆಯಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಈ ಬಗ್ಗೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, 'ಅನಧಿಕೃತ ಪುತ್ಥಳಿಗಳ ತೆರವಿಗೆ ಹೈಕೋರ್ಟ್ ಈಗಾಗಲೇ ಆದೇಶ ನೀಡಿದೆ. ಮುಂದಿನ ದಿನಗಳಲ್ಲಿ ಪುನೀತ್ ಅವರ ಪ್ರತಿಮೆ ನಿರ್ಮಾಣ, ಸ್ಥಾಪನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯಲಿದೆ' ಎಂದರು.
ಮಳೆ ನಿಂತ ಬಳಿಕ ದುರಸ್ತಿ ಕಾಮಗಾರಿ:
ಮಳೆ ಬಂದಾಗ ನಗರದ ಅನೇಕ ಪ್ರದೇಶಗಳು ಹಾನಿಗೊಳಗಾಗ್ತಿವೆ. ಅಸಮರ್ಪಕ ಚರಂಡಿ ನಿರ್ವಹಣೆ ಇದಕ್ಕೆ ಮುಖ್ಯ ಕಾರಣ. ಈ ಬಗ್ಗೆ ಈಗಾಗಲೇ ಸಿಎಂ, ಪಾಲಿಕೆ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಕ್ರಮ ಜಾರಿಗೆ ಆದೇಶ ನೀಡಿದ್ದಾರೆ. ಮಳೆ ನಿಂತ ಬಳಿಕ ಕಾಮಗಾರಿ ಕೈಗೊಳ್ಳಲಾಗುವುದು. ಜನರು, ಜನಪ್ರತಿನಿಧಿಗಳು ದೂರು ನೀಡಿದ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಲಿದ್ದಾರೆ ಎಂದು ಹೇಳಿದರು.
ರಸ್ತೆಗುಂಡಿ ಸಮರ್ಪಕ, ತ್ವರಿತವಾಗಿ ಮುಚ್ಚಲು ಸಿಎಂ ನಿರ್ದೇಶನ ನೀಡಿದ್ದಾರೆ. ಆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಅಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.