ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ, ಸ್ವಚ್ಛತೆ ಕಾಪಾಡುವ ಹಾಗೂ ಕಂಟೋನ್ಮೆಂಟ್ ಜೋನ್ ನಿರ್ವಹಣೆ ಕುರಿತು ಆಯುಕ್ತರು ಮಲ್ಲೇಶ್ವರಂ ಐ.ಪಿ.ಪಿ ತರಬೇತಿ ಕೇಂದ್ರದಲ್ಲಿ ಮುಖ್ಯ ಅಭಿಯಂತರರು(ರಸ್ತೆ ಮೂಲಭೂತ ಸೌಕರ್ಯ ವಿಭಾಗ) ಹಾಗೂ ವಲಯ ಮುಖ್ಯ ಅಭಿಯಂತರರ ಸಭೆ ನಡೆಸಿದರು.
ಬಿಬಿಎಂಪಿಯ ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಬರುವ ಪ್ರಮುಖ ರಸ್ತೆ, ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬಿದ್ದಿರುವ ರಸ್ತೆ ಗುಂಡಿಗಳು, ರಸ್ತೆ ಬದಿಗಳಲ್ಲಿ ಬಿದ್ದಿರುವ ಕಸವನ್ನು 15 ದಿನದೊಳಗೆ ತೆರವುಗೊಳಿಸಿ ಸಂಪೂರ್ಣ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರ ವ್ಯಾಪ್ತಿಯಲ್ಲಿ ಸುಮಾರು 1,400 ಕಿ.ಮೀ ಪ್ರಮುಖ ರಸ್ತೆ, ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳು ಬರಲಿದ್ದು, ತ್ವರಿತಗತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ವತಿಯಿಂದ ಡಾಂಬರು ಮಿಶ್ರಣ ಘಟಕ ಸ್ಥಾಪಿಸಿದ್ದು, ಪ್ರತಿನಿತ್ಯ 50 ರಿಂದ 60 ಟ್ರಕ್ ಹಾಟ್ ಮಿಕ್ಸ್ ಡಾಂಬರನ್ನು ಉತ್ಪತ್ತಿಸುವ ಸಾಮರ್ಥ್ಯವಿದೆ. ಪೈಥಾನ್ ಯಂತ್ರಗಳಿರುವ ಕಡೆ ಅದೇ ಯಂತ್ರಗಳಿಂದಲೇ ಮುಚ್ಚಿ ಹಾಗೂ ದೋಷ ಮುಕ್ತ (DLP) ಅವಧಿಯಲ್ಲಿರುವ ರಸ್ತೆಗಳಲ್ಲಿ ಗುತ್ತಿಗೆದಾರರಿಂದಲೇ ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕು. ಉಳಿದ ಕಡೆ ಡಾಂಬರು ಮಿಶ್ರಣ ಘಟಕದಿಂದ ಡಾಂಬರು ಪಡೆದು ಕೂಡಲೇ ರಸ್ತೆಗುಂಡಿಗಳನ್ನು ಮುಚ್ಚಬೇಕು ಎಂದು ಆಯುಕ್ತರು ಮುಖ್ಯ ಇಂಜಿನಿಯರ್ಗೆ ಸೂಚನೆ ನೀಡಿದರು.